ಕಾಂಗ್ರೆಸ್‍ನಿಂದ ತಾಲಿಬಾನ್ ಆಡಳಿತ ತರುವ ಪ್ರಯತ್ನ: ಪ್ರತಾಪಸಿಂಹ ಕಿಡಿ

ಮೈಸೂರು: ಏ.16:- ಎಸ್‍ಡಿಪಿಐನ ಬೆಂಬಲವನ್ನು ಪರಮೇಶ್ವರ್ ಅವರ ಮೂಲಕ ಕೋರಿಸುವ ಮೂಲಕ ಸಿದ್ದರಾಮಯ್ಯ ಮತ್ತೆ ತಾಲಿಬಾನ್ ಸರ್ಕಾರ ತರಲು ಹೊರಟಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಕಿಡಿಕಾರಿದರು.
ಮೈಸೂರಿನ ಬಿಜೆಪಿಯ ಮಾದ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಅವರು ಎಸ್‍ಡಿಪಿಐ ಬೆಂಬಲ ಕೋರಿದ್ದಾರೆ. ಈ ಮೂಲಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದಲ್ಲಿ ತಾಲಿಬಾನಿ ಸರಕಾರವನ್ನು ಎಸ್‍ಡಿಪಿಐ ಬೆಂಬಲದೊಂದಿಗೆ ತರಲು ಹೊರಟಿದ್ದಾರೆ. ಇದನ್ನು ಗಮನಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್‍ನ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಎಸ್‍ಡಿಪಿಐ ನಡೆಸಿದ ಗಲಭೆಗಳಲ್ಲಿ ಪಾಲ್ಗೊಂಡಿದ್ದವರ ಮೇಲಿನ ಕೇಸ್ ಅನ್ನು ವಿಶೇಷ ಕ್ಯಾಬಿನೆಟ್ ಮೂಲಕ ಹಿಂಪಡೆದುಕೊಂಡರು. ಅಂದೇ ನಮ್ಮ ಅರಿವಿಗೆ ಬಂತೂ ಎಸ್‍ಡಿಪಿಐ, ಕೆಎಫ್‍ಡಿ, ಪಿಎಫ್‍ಐ ಕಾರ್ಯಕರ್ತರು ಸಿದ್ದರಾಮಯ್ಯನವರ ದತ್ತು ಮಕ್ಕಳಾಗಿದ್ದಾರೆ. ಹೀಗಾಗಿ 2047ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಹೊರಟ ಭಯೋತ್ಪಾದಕರನ್ನು ಅಧಿಕಾರದ ಆಸೆಗೆ ಬೆಂಬಲಿಸುವ ಸಂಘಟನೆಗಳ ಜೊತೆ ಕಾಂಗ್ರೆಸ್ ಕೈಜೋಡಿಸಿದ್ದಾರೆ. ಕಾಂಗ್ರೆಸ್ ಸರಕಾರ ಬಂದರೆ ಕರ್ನಾಟಕದಲ್ಲಿ ರಾಜಕೀಯ ಹತ್ಯೆಗಳು ನಡೆಯಲಿವೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ನಡೆದ ಅನೇಕ ಹತ್ಯೆಗಳ ಕುರಿತು ಅವರು ಮಾಹಿತಿ ನೀಡಿ, ಸಿದ್ದರಾಮಯ್ಯ ಅವಧಿಯಲ್ಲಿ ಪೆÇಲೀಸ್ ಅಧಿಕಾರಿಗಳ ಅನುಮಾನಾಸ್ಪದ ಸಾವು ಮುಂದುವರಿಯಿತು. ಅನೇಕ ಅಧಿಕಾರಿಗಳ ಮೇಲೆ ದಾಳಿ ನಡೆಯಿತು. ಸಿದ್ದರಾಮಯ್ಯನವರ ಸಾಕು ಮಕ್ಕಳಿಂದ ಇದೆಲ್ಲ ಆಗಿದೆ. ತಮ್ಮ ಪಕ್ಷದ ಶಾಸಕ ತನ್ವೀರ್‍ಸೇಠ್ ಮೇಲೆ ದಾಳಿ ನಡೆದರೂ ಕಾಂಗ್ರೆಸ್ಸಿಗರು ಎಚ್ಚರವಾಗಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‍ಗೆ ಮತ ಹಾಕಿದರೆ ರಾಜ್ಯ ಇನ್ನೊಂದು ಕೇರಳ ಆಗಲಿದೆ. ಈ ಬಗ್ಗೆ ಜನರು ಅರಿತು ಈ ಬಾರಿ ತಕ್ಕ ಉತ್ತರ ಕೊಡಲಿದ್ದಾರೆಂದರು.
ವಿ.ಸೋಮಣ್ಣ ಅವರು ಸೋಮವಾರ ವರುಣಾ ಮತ್ತು ಚಾಮರಾಜನಗರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಆ ಮೂಲಕ 15ವರ್ಷದಿಂದ ಅಪ್ಪ ಮತ್ತು ಮಗನ ಕಾರುಬಾರು, ದರ್ಬಾರ್ ಅಂತ್ಯವಾಗುವ ದಿನ ಹತ್ತಿರವಾಗುತ್ತಿದೆ. ವರುಣ, ನರಸಿಂಹರಾಜ ಮಾತ್ರವಲ್ಲ ಮೈಸೂರು ಭಾಗದಲ್ಲಿ 8-10 ಸೀಟು ಗೆಲ್ಲಲಿದ್ದೇವೆ. ಮೈಸೂರು, ಚಾಮರಾಜನಗರ ಹಾಗೂ ಕೊಡಗು ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡಲಿದ್ದೇನೆ. ಐದು ವರ್ಷದ ಸಾಧನೆ ಹೇಳದ ಕಾಂಗ್ರೆಸ್ ಪುಕ್ಸಟ್ಟೆಗಳ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಬಂದರೆ ಎನೂ ಮಾಡುತ್ತೇವೆಂಬ ಆಲೋಚನೆಯೇ ಇಲ್ಲ. ಹೀಗಾಗಿ ಪಕ್ಸಟ್ಟೆಗಳನ್ನು ಘೋಷಿಸುತ್ತಿದ್ದಾರೆ. ಆದರೆ, ಬಿಜೆಪಿ ಮೈಸೂರು- ಬೆಂಗಳೂರು ಹೈವೇ ಕಾರ್ಯಗತವಾಗಿದೆ. ಜಲಜೀವನ್ ಮಿಷನ್‍ನಲ್ಲಿ ಗ್ರಾಮಾಂತರದ ಎಲ್ಲ ಮನೆಗಳಿಗೆ ನಳ್ಳಿ ನೀರು ಕೊಡಲಿದ್ದೇವೆ. ಅಭಿವೃದ್ಧಿ ಕಾರ್ಯವನ್ನು ಗಮನಿಸಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡುತ್ತೇವೆಂದರು.
ಮೈಸೂರು ಜಿಲ್ಲಾ ಅಧ್ಯಕ್ಷ ಶ್ರೀವತ್ಸ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ವಿ.ಕವಿಶ್ ಗೌಡ, ಮೂಡಾ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್ ಇದ್ದರು.