ಬ್ಯಾಡಗಿ,ಜೂ7: ರಾಜ್ಯದ ಜನತೆಗೆ ಬಿಟ್ಟಿ ಭಾಗ್ಯಗಳ ಘೋಷಣೆಯ ಮೂಲಕ ಆಸೆ ಆಮಿಷಗಳನ್ನು ಒಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನರ ನಂಬಿಕೆಗೆ ದ್ರೋಹ ಎಸಗುತ್ತಿದೆ ಎಂದು ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ತಾಲೂಕಾ ಬಿಜೆಪಿಯ ವತಿಯಿಂದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾನು ಚುನಾವಣೆಯ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಕಾರ್ಡ್ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಕಂಡಿಷನ್ ಹಾಕಿರುವುದು ಯಾವ ಪುರುಷಾರ್ಥಕ್ಕಾಗಿ..? ಎಂದು ಪ್ರಶ್ನಿಸಿದರಲ್ಲದೇ, ಗೃಹಜ್ಯೋತಿ ಹೆಸರಿನಲ್ಲಿ ಪ್ರತಿ ತಿಂಗಳು 200ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಈಗಾ ಅದಕ್ಕೆ ವಾರ್ಷಿಕ ಸರಾಸರಿಯ ಪರ್ಸಂಟೇಜ್ ಲೆಕ್ಕಾಚಾರ ಹಾಕುವುದು ಯಾವ ನ್ಯಾಯ.! ಅಲ್ಲದೇ ಇದೇ ಸಂದರ್ಭದಲ್ಲಿ ಸದ್ದಿಲ್ಲದೆ ವಿದ್ಯುತ್ ದರ ಏರಿಕೆಯ ಮೂಲಕ ಜನರಿಗೆ ಬರೆ ಎಳೆದಂತಾಗಿದೆ ಎಂದು ಆಪಾದಿಸಿದರು.
ಹೆಸರಿಗೆ ಮಾತ್ರ ಉಚಿತ ಭಾಗ್ಯ:
ತಾಲೂಕಾ ಬಿಜೆಪಿ ಅಧ್ಯಕ್ಷ ಹಾಲೇಶ ಜಾಧವ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಗ್ಯಾರಂಟಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಕಾಂಗ್ರೆಸ್ ಸರ್ಕಾರದವರು ಈಗ ಕಂಡೀಶನ್ ಮೊರೆ ಹೋಗಿರುವುದು ಹಾಸ್ಯಾಸ್ಪದವಾಗಿದೆ. ಘೋಷಣೆ ಮಾಡುವಾಗ ಇಲ್ಲದ ಕಂಡಿಷನ್ ಹೀಗ್ಯಾಕೆ..? ಕಾಂಗ್ರೆಸ್ ಗ್ಯಾರಂಟಿ ಹೆಸರಿಗೆ ಮಾತ್ರ ಉಚಿತ ಎನ್ನುವಂತಾಗಿದೆ. ಅಲ್ಲದೇ ವಿದ್ಯುತ್ ದರ ಏರಿಕೆ ಹಾಗೂ ಹಾಲಿನ ಪೆÇ್ರೀತ್ಸಾಹ ಧನದ ಕಡಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆಯ ಬಗ್ಗೆ ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರಪ್ಪ ಮಾತನವರ, ಸುರೇಶ ಉದ್ಯೋಗಣ್ಣನವರ, ವಿಜಯ ಬಳ್ಳಾರಿ, ಸುರೇಶ ಆಸಾದಿ, ರಾಜು ಹೊಸಕೇರಿ, ನಿಂಗಪ್ಪ ಬಟ್ಟಲಕಟ್ಟಿ, ಎಸ್.ಎಂ.ಅಕ್ಕಿ, ಪುರಸಭೆಯ ಸದಸ್ಯರಾದ ಬಸವಣ್ಣೆಪ್ಪ ಛತ್ರದ, ಫಕ್ಕೀರಮ್ಮ ಚಲುವಾದಿ, ಸುಭಾಸ ಮಾಳಗಿ, ಸರೋಜಾ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ್, ಕಲಾವತಿ ಬಡಿಗೇರ, ವಿಷ್ಣುಕಾಂತ ಬೆನ್ನೂರ, ಅಪ್ಪಣ್ಣ ಬಾಗಲಕೋಟೆ, ಮಾರುತಿ ಫಾಸಿ, ಪ್ರವೀಣ ಸವಣೂರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.