ಹುಬ್ಬಳ್ಳಿ, ಜೂ.೨೧: ಗ್ಯಾರಂಟಿ ವಿಷಯದಲ್ಲಿ ದಿನಕ್ಕೊಂದು ಷರತ್ತು ಹಾಕುವ ಮೂಲಕ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಐದು ಕೆ.ಜಿ. ಅಕ್ಕಿ ಕೊಡುವಂತೆ ಕರ್ನಾಟಕದಲ್ಲೂ ಕೊಡುತ್ತಿದೆ. ಇದು ಸಿದ್ಧರಾಮಯ್ಯನವರ ಅಕ್ಕಿ ಅಲ್ಲ ಎಂದು ಚಾಟಿ ಬೀಸಿದರು.
ಜನರಿಂದ ಮತ ಕೇಳುವಾಗ ಹತ್ತು ಕೆ.ಜಿ.ಅಕ್ಕಿ ಕೊಡುವುದಾಗಿ ಹೇಳಿದ್ದವರೇ ಈಗ ಅದನ್ನು ಕೊಡಲಿ ಎಂದ ಅವರು, ಕೇಂದ್ರ ಸರ್ಕಾರ ಕೊಟ್ಟರೆ ನಾವು ಕೊಡುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳಿದ್ದರಾ ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶ, ಮಧ್ಯಪ್ರದೇಶ, ಸೇರಿ ಎಲ್ಲರೂ ಮನಸಿಗೆ ಬಂದಂತೆ ಅಕ್ಕಿ ಕೇಳುತ್ತಿದ್ದಾರೆ ಕೇಳಿದಂತೆ ಕೊಡಲಾಗುತ್ತದೆಯೇ? ಇಂತಿಷ್ಟು ಅಕ್ಕಿ ಸಂಗ್ರಹದಲ್ಲಿರಬೇಕೆಂಬ ನಿಯಮವಿದೆ, ಅದು ಇರಬೇಕು, ಗೋದಾಮಿನ ಖಾಲಿ ಆದರೆ ಆಹಾರ ಭದ್ರತೆ ಪ್ರಶ್ನೆ ಬರುತ್ತದೆ ಎಂಬುದು ಇವರಿಗೆ ಗೊತ್ತೇ? ಎಂದು ಖಾರವಾಗಿಯೇ ಕೇಳಿದರು.
ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಸದ್ಯ ಬಸ್‌ಗಳಲ್ಲಿ ಪುರುಷ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದಂತಾಗಿದೆ, ಓವರ್ ಲೋಡ್‌ನಿಂದ ಅಪಘಾತಗಳು ಸಂಭವಿಸುತ್ತಿವೆ, ಕಾಂಗ್ರೆಸ್ ಸರ್ಕಾರ ಹೊಸ ಬಸ್‌ಗಳನ್ನು ಖರೀದಿ ಮಾಡಲಿ ಎಂದು ಜೋಶಿ ನುಡಿದರು.
ಹೋಲಿಕೆ ಸರಿಯಲ್ಲ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಬಿಜೆಪಿಯ ಕೆಳಮಟ್ಟದ ಕಾರ್ಯಕರ್ತರು, ಅವರೇನೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಬಿಜೆಪಿ ನಾಯಕರಾಗಿಯೇ ಮುಂದುವರಿಯುತ್ತಾರೆ ಎಂದ ಅವರು, ಜಗದೀಶ ಶೆಟ್ಟರ್ ಅವರಿಗೂ ಮುನೇನಕೊಪ್ಪರಿಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.