ಕಾಂಗ್ರೆಸ್‌ನಿಂದ ಓಟ್‌ಬ್ಯಾಂಕ್ ರಾಜಕಾರಣ

ಹುಬ್ಬಳ್ಳಿ, ಮೇ ೨: ಕಾಂಗ್ರೆಸ್ ಓಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಕರೆತರುವ ವಿಷಯದಲ್ಲಿ ಸಿ.ಎಂ. ಸಿದ್ಧರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸುತ್ತ, ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು.
ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ಕ್ಲಿಪ್ ೨೧ಕ್ಕೆ ಹೊರಬಂದರೆ ದಿ. ೨೮ರವರೆಗೆ ಏಕೆ ಎಫ್.ಐ.ಆರ್. ಮಾಡಲಿಲ್ಲ? ಎಂದು ಪ್ರಶ್ನಿಸಿದ ಅವರು ಇಲ್ಲಿ ಬೇರೆಯವರ ಮೇಲೆ ತಪ್ಪು ಹೊರಿಸುವ ಪ್ರಯತ್ನ ನಡೆದಿದೆ ಎಂದು ದೂರಿದರು.
ರಾಸಲೀಲೆ ವಿಡಿಯೋ ಆರು ತಿಂಗಳು, ಒಂದು ವರ್ಷದಷ್ಟು ಹಳೆಯದಲ್ಲ. ೨೦೧೮ ರಿಂದಲೂ ಇದೆ. ಆಗ ಕಾಂಗ್ರೆಸ್, ಜೆಡಿಎಸ್‌ನವರು ಸೇರಿಕೊಂಡು ಪ್ರಚಾರ ಮಾಡಿದಿರಿ. ಮತಯಾಚನೆ ಮಾಡಿದಿರಿ. ಯಾವ ಕಾರಣಕ್ಕಾಗಿ ಎಫ್.ಐ.ಆರ್. ಮಾಡಲಿಲ್ಲ? ಎಂದು ಜೋಶಿ ಖಾರವಾಗಿ ಕಿಡಿಕಾರಿದರು.
ನಗರದಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ಕುಟುಂಬದವರು ಕೇಂದ್ರ ಗೃಹ ಸಚಿವ ಅಮೀತ್ ಶಾರನ್ನು ಭೇಟಿಯಾಗಿ ಆರೋಪಿಗೆ ಕಠಿಣ ಶಿಕ್ಷೆಯಾಗಲಿ, ನಮಗೆ ತ್ವರಿತ ನ್ಯಾಯ ಸಿಗಲಿ ಎಂದು ಮನವಿ ಮಾಡಿದ್ದಾರೆ ಎಂದ ಅವರು, ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆಯೂ ಕೇಳಿದ್ದಾರೆ ಎಂದು ತಿಳಿಸಿದರು.
ದೇಶಾದ್ಯಂತ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪ್ರಚಂಡ ಗಾಳಿ ಬೀಸುತ್ತಿದೆ ಎಂದ ಅವರು ಉತ್ತರ ಕರ್ನಾಟಕ ಭಾಗದ ೧೪ ಕ್ಷೇತ್ರಗಳಲ್ಲಿ ಅಷ್ಟನ್ನೂ ಗೆಲ್ಲುವ ಭರವಸೆ ಇದೆ ಎಂದು ತಿಳಿಸಿದರು.