ಕಾಂಗ್ರೆಸ್‌ನವರ ಪೊಳ್ಳು ಭರವಸೆಗಳಿಗೆ ಮೂರು ಕಾಸಿನ ಬೆಲೆಯಿಲ್ಲ- ಬಿ.ವೈ. ವಿಜಯೇಂದ್ರ

ಕೋಲಾರ,ಮಾ,೨೭-ಕಾಂಗ್ರೆಸ್‌ನವರ ಪೊಳ್ಳು ಭರವಸೆಗಳಿಗೆ ಮೂರು ಕಾಸಿನ ಬೆಲೆ ಇಲ್ಲ ಎನ್ನುವುದು ರಾಜ್ಯದ ಪ್ರಜ್ಞಾವಂತ ಮತದಾರರಿಗೆ ಅರ್ಥವಾಗಿದ್ದು, ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ನಗರ ಹೊರವಲಯದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದವರು ಏನು ಮಾಡುತ್ತಾರೆ ಎನ್ನುವುದರ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ಬಿಜೆಪಿ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ಪಡೆದು ಕೇಂದ್ರ, ರಾಜ್ಯ ಸರಕಾರಗಳ ಕೊಡುಗೆಗಳು, ಕಾರ್ಯಕ್ರಮಗಳ ಆಧಾರದ ಮೇರೆಗೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಎಲ್ಲರೂ ಒಗ್ಗಟ್ಟಾಗಿ ಓಡಾಡುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ೫ ವರ್ಷ ಆಡಳಿತ ನಡೆಸಿತ್ತು. ಆ ಭಾಗ್ಯ, ಈ ಭಾಗ್ಯ ಕೊಟ್ಟಿದ್ದೇವೆಂದು ಹಿರಿಯ ನಾಯಕರು ಹೇಳಿಕೊಳ್ಳುತ್ತಿದ್ದರು. ಆದರೆ ಮತ್ತೆ ಅವರು ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಅರ್ಥವಾದ ಸಂದರ್ಭದಲ್ಲಿ ಸಮಾಜ-ಸಮಾಜಗಳ ನಡುವೆ ವಿಷಬೀಜ ಬಿತ್ತಿ ವೀರಶೈವ ಸಮಾಜವನ್ನು ಒಡೆದು ಆಳುವ ಮಟ್ಟಕ್ಕೆ ಇಳಿದಿದ್ದುದು ರಾಜ್ಯದ ಜನರು ಮರೆತಿಲ್ಲ ಎಂದು ನೆನಪಿಸಿ ಕೊಂಡರು.
ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹಾಗೂ ಅಧಿಕಾರಕ್ಕೆ ಬರಬೇಕೆನ್ನುವ ಸಲುವಾಗಿ ಆ ಮಟ್ಟಕ್ಕೆ ಇಳಿದಿದ್ದಾರೆ. ಎಲ್ಲ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿರುವ ಬಿಜೆಪಿ ಹಾಗೂ ಪ್ರಧಾನಿ ಮೋದಿ ಬಗ್ಗೆ ರಾಜ್ಯದ ಜನರಿಗೆ ವಿಶ್ವಾಸವಿದೆ ಎಂದರು.
ನಾನು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರವಾಗಿ ಕಳೆದ ಒಂದು ತಿಂಗಳಿಂದಲೂ ಚರ್ಚೆಯಾಗುತ್ತಿತ್ತು, ವಾರದಿಂದ ಚರ್ಚೆ ತೀವ್ರವಾಗಿದೆ. ಆದರೆ, ಶಿಕಾರಿಪುರ ಕ್ಷೇತ್ರದ ಹಿರಿಯರೊಂದಿಗೆ ಚರ್ಚಿಸಿ ಈಗಾಗಲೇ ಪ್ರವಾಸವನ್ನೂ ಮಾಡುತ್ತಿದ್ದೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗುತ್ತೇನೆ. ಆದರೆ ಈವರೆಗೂ ಯಾವುದೇ ತೀರ್ಮಾನವನ್ನು ಪಕ್ಷ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಗೊಳಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಹೇಳಿಕೆಯು ಒಬ್ಬ ನಾಯಕನಿಗೆ ಸೀಮಿತವಲ್ಲ. ಹಿಂದುಳಿದ ಸಮಯದಾಯದ ವಿರುದ್ಧ ಹೇಳಿಕೆ ನೀಡಿ ಅವಮಾನ ಮಾಡಿರುವುದಾಗಿದ್ದು, ಕಾನೂನು ಪ್ರಕಾರದಂತೆಯೇ ಶಿಕ್ಷೆಯಾಗಿದೆ. ನ್ಯಾಯಾಲಯದ ತೀರ್ಮಾನಕ್ಕೂ ಬಿಜೆಪಿ ಪಕ್ಷಕ್ಕೂ ಸಂಬಂಧವಿಲ್ಲ ಎಂದರು.
ಅಧಿಕಾರಕ್ಕೆ ಬರಲು ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಜನರ ಮುಂದೆ ಏನು ಕಾರ್ಯಕ್ರಮ ತೆಗೆದುಕೊಂಡು ಹೋಗಬೇಕು, ಹಿಂದೆ ಏನು ಸಾಧನೆ ಮಾಡಿದ್ದೇವೆಂದು ಹೇಳಿಕೊಳ್ಳುವುದಕ್ಕೂ ಏನೂ ಇಲ್ಲ. ಗ್ಯಾರಂಟಿ ಕಾರ್ಡ್ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಆದರೆ ೫೦-೬೦ ವರ್ಷ ಆಡಳಿತ ನಡೆಸಿದವರಿಗೆ ಇನ್ನೂ ಸಮಯ ಬೇಕೇ ಎಂದು ಪ್ರಶ್ನಿಸಿ, ಜನರು ಮೂರ್ಖರಲ್ಲ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶಗಳು ಬಹಳ ಯಶಸ್ವಿಯಾಗಿ ನಡೆಯುತ್ತಿವೆ. ಕೆಜಿಎಫ್‌ನಲ್ಲಿ ಯುವ ಸಮಾವೇಶ ನಡೆಯುತ್ತಿರುವುದಾಗಿ ತಿಳಿಸಿದರು.
ಸಂಸದ ಎಸ್.ಮುನಿಸ್ವಾಮಿ, ತಮಿಳುನಾಡು ರಾಜ್ಯದ ಬಿಜೆಪಿ ಅಧ್ಯಕ್ಷ ಅಣ್ಣಮಲೈ, ಮಾಜಿ ಸಚಿವ ವರ್ತೂರು ಪ್ರಕಾಶ್, ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಇದ್ದರು.