ಮೈಸೂರು: ಏ.28:- ಕಾಂಗ್ರೆಸ್‍ಗೆ ದೇಶದಲ್ಲಿ ಸಮರ್ಥ ನಾಯಕರೇ ಇಲ್ಲ. ಇದರಿಂದಾಗಿ ಕಾಂಗ್ರೆಸ್‍ನ ಸ್ಥಿತಿ ಮದ್ದೂರು ಸೆಟಲ್ ರೀತಿ ಆಗಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ವ್ಯಂಗ್ಯವಾಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಾತ್ರವಲ್ಲದೆ ದೇಶದಲ್ಲೇ ಕಾಂಗ್ರೆಸ್‍ಗೆ ನಾಯಕರಿಲ್ಲ. ಅಮೇಥಿ, ರಾಮಬರೇಲಿಯಲ್ಲಿ ಸೋತವರು ಇಲ್ಲಿ ಬಂದು ಭಾಷಣ ಮಾಡುತ್ತಾರೆ. ಕಾಂಗ್ರೆಸ್‍ನ ಪರಿಸ್ಥಿತಿ ಒಂದು ರೀತಿ ಮದ್ದೂರು ಸೆಟಲ್ ಟ್ರೈನ್ ಥರ ಆಗಿದೆ. ಅದು ಮದ್ದೂರಿನಿಂದ ಹೊರಟರೆ ಬೆಂಗಳೂರಿಗೆ ಯಾವಾಗ ತಲುಪುತ್ತದೋ ಗೊತ್ತಿಲ್ಲ ಎಂದರು.
ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಒಂದು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವೇ? ಎಲ್ಲಾ ಮತಗಳನ್ನೂ ಇವರು ಪಡೆಯಲು ಆಗುತ್ತದೆಯೇ? ಮಾನಸಿಕ ರೋಗಿಗಳು, ದಡ್ಡರು ಈ ರೀತಿಯ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯ ಸಿಎಂ, ವಿಪಕ್ಷನಾಯಕರಾಗಿರುವವರು. ಮಾತನಾಡುವ ಮುನ್ನ ಯೋಚಿಸಬೇಕು ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿ, ಕೊನೆಗೂ ವರುಣಾಗೆ ಬಂದು ನಿಂತಿದ್ದಾರೆ. ವರುಣಾಗೆ ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ ಎಂದು ಹೇಳಿದ್ದವರು ಆಗಲೇ ಎರಡನೇ ಬಾರಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಚಾಮುಡೇಶ್ವರಿಯಲ್ಲಿ ಸ್ಪರ್ಧಿಸಿದ್ದಾಗಲೂ ಇದೇ ರೀತಿ ಹೇಳಿದ್ದರು. ಸೋಲಿನ ಸುಳಿವು ಸಿಕ್ಕ ಮೇಲೆ ಗಲ್ಲಿ ಗಲ್ಲಿಯಲ್ಲಿ ಓಡಾಡಿದ್ದರು. ತಮ್ಮ ಅಹಂಕಾರದಿಂದಲೇ 36 ಸಾವಿರ ಮತಗಳಿಂದ ಸೋತಿದ್ದರು. ಅವರ ಆಪ್ತನೊಬ್ಬ 20 ಸಾವಿರ ಮತಗಳ ಅಂತರದಿಂದ ಸೋತಿದ್ದ ಎಂದು ಎಚ್.ಸಿ.ಮಹದೇವಪ್ಪ ಹೆಸರೇಳದೆ ಕುಟುಕಿದರು.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಶ್ರೀನಿವಾಸ್ ಪ್ರಸಾದ್, ಡಿ.ಕೆ.ಶಿವಕುಮಾರ್ ತಲೆ ಮೇಲೆ ಐಟಿ, ಇಡಿ ಕತ್ತಿ ತೂಗಾಡುತ್ತಿದೆ. ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಒಂದು ಪಕ್ಷದ ಅಧ್ಯಕ್ಷರಾದವರು ಈ ರೀತಿ ಮಾತನಾಡುವುದು ಸರಿಯಲ್ಲ. ಇಂತಹವರು ರಾಜ್ಯದ ಮುಖ್ಯಮಂತ್ರಿ ಆದರೆ ಯಾವ ರೀತಿ ಆಡಳಿತ ನಡೆಸುತ್ತಾರೆ ಎಂದರು.
ಜಿಲ್ಲೆಯಲ್ಲಿ ಪಕ್ಷದ ಬಲ ಹೆಚ್ಚಾಗಿದೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಹಾಲಿ ಇಬ್ಬರು ಶಾಸಕರಿಗೆ ಟಿಕೆಟ್ ನೀಡಿದ್ದು, ಉಳಿದ ಕಡೆ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಪಕ್ಷದ ಹೋರಾಟ ಸಂಘಟಿತವಾಗಿ ನಡೆಯುತ್ತಿದೆ. ಕಳೆದ ಲೋಕಸಭೆ ಚುನಾವಣೆಯಿಂದ ಗ್ರಾಮಾಂತರ ಭಾಗದಲ್ಲೂ ಪಕ್ಷದ ಶಕ್ತಿ ವೃದ್ಧಿಸಿದೆ. ಕಳೆದ ಬಾರಿ ವರುಣಾದಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಾಗಿತ್ತು. ಈ ಬಾರಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರುಣಾದಲ್ಲಿ ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ನಂಜನಗೂಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕದೆ ಕಾಂಗ್ರೆಸ್‍ಗೆ ಬೆಂಬಲ ನೀಡಿದೆ. ವರುಣಾದಲ್ಲಿ ಸ್ಪರ್ಧೆ ಮಾಡಿದೆ. ಇಲ್ಲಿ ಒಳ ಒಪ್ಪಂದ ಮಾಡಿಕೊಂಡಿರುವವರು ಯಾರು? ಇವರಿಗೆ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ನಾನು ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಯಿಲ್ಲದೆ ಜೆಡಿಎಸ್‍ನ ಕಳಲೆ ಕೇಶವಮೂರ್ತಿ ಕಣಕ್ಕಿಳಿಸಿದ್ದರು. ಈ ಬಾರಿ ನಂಜನಗೂಡಿನಲ್ಲಿ ಜೆಡಿಎಸ್ ಘಟಕವೇ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದೆ ಎಂದು ಕಿಡಿ ಕಾರಿದರು. ಸುದ್ದಿಗೋಷ್ಠಿಯಲ್ಲಿ ಮೇಯರ್ ಶಿವಕುಮಾರ್, ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ, ಮುಖಂಡರಾದ ಜಯಪ್ರಕಾಶ್, ವಕ್ತಾರರಾದ ಕೆ.ವಸಂತಕುಮಾರ್, ವಿ.ಗಿರಿಧರ್ ಸೇರಿ ಹಲವರು ಭಾಗವಹಿಸಿದ್ದರು.