
ಹರಪನಹಳ್ಳಿ.ಮಾ.೩ : ತಾಲ್ಲೂಕಿನ ಚಿಗಟೇರಿ ಹೋಬಳಿಯಲ್ಲಿ ಕಾರ್ಯಕರ್ತರ ಪ್ರತ್ಯೇಕ ಸಭೆಹರಪನಹಳ್ಳಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕಾರಣ ರಂಗೇರಿದೆ. ಅದರಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಚಿಗಟೇರಿ ಹೋಬಳಿಯ ಪ್ರವಾಸಿ ಮಂದಿರ ಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಒಟ್ಟು 17 ಜನರು ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಟಿಕೆಟ್ ನಿರೀಕ್ಷೆಯಲ್ಲಿದ್ದು, ತಮ್ಮ ಶಕ್ತಿ ಪ್ರದರ್ಶನ ಮಾಡುವುದು ಅನಿವಾರ್ಯವಾಗಿದೆ. ಆದರೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಯಾರೋ ಬಬ್ಬ ನಾಯಕನ್ನನ್ನು ಮೆಚ್ಚಿಸಲು ಸಭೆ ನಡೆಸಿರುವುದಾಗಿ ತಿಳಿದು ಬಂದಿದೆ. ಚಿಗಟೇರಿ ಹೋಬಳಿಯಲ್ಲಿ ಅಸ್ಥಿತ್ವ ಕಳೆದುಕೊಂಡಿರುವ ನಾಯಕನ ಅಸ್ಥಿತ್ವಕ್ಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಹೊರಗಿಟ್ಟು ಸಭೆ ನಡೆಸಲಾಗಿಯಾ ಎನ್ನುವ ಅನುಮಾನ ಕಾಡುತ್ತಿದೆ. ಕ್ಷೇತ್ರದಲ್ಲಿ ಒಟ್ಟು 17 ಜನ ಟಿಕೆಟ್ ಆಕಾಂಕ್ಷಿಗಳಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಬೆಂಬಲಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ವೇದಿಕೆಯಲ್ಲಿ ಯಾವ ಒಬ್ಬ ಆಕಾಂಕ್ಷಿಗಳು ಕೂಡ ಇರಲಿಲ್ಲ. ಆಗಾದರೆ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಪ್ರೇಮಕುಮಾರಗೌಡ ಅವರನ್ನು ಹೊರಗಿಡುವ ಅವಶ್ಯಕತೆ ಏನೀತ್ತು ಎನ್ನುವ ಪ್ರಶ್ನೆ ಉದ್ಭವವಾಗುತ್ತಿದೆ. ಇತ್ತೀಚೆಗೆ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಕೆ.ಪ್ರಕಾಶ್ ಅವರನ್ನು ಕೆಳಗಿಳಿಸಿ ಯುವ ನಾಯಕ ಪಿ.ಪ್ರೇಮಕುಮಾರಗೌಡ ಅವರನ್ನು ನೇಮಕ ಮಾಡಲಾಗಿತ್ತು. ಹೀಗಾಗಿ ಚಿಗಟೇರಿ ಹೋಬಳಿಯಲ್ಲಿ ಬಿ.ಕೆ.ಪ್ರಕಾಶ್ ಅವರ ಶಕ್ತಿ ಕುಂದಿದAತೆ ಕಾಣುತ್ತಿತ್ತು. ಅದನ್ನು ಬಲಪಡಿಸಿಕೊಳ್ಳಲು ಬಿ.ಕೆ.ಪ್ರಕಾಶ್ ಅವರು ಸಭೆ ಏರ್ಪಾಡು ಮಾಡಿದ್ದಾರಾ ಎನ್ನುವ ಪ್ರಶ್ನೆ ಕಾಡದೇ ಇರಲಾರದು. ಹರಪನಹಳ್ಳಿ ಕ್ಷೇತ್ರದಲ್ಲಿ ಬಣ ರಾಜಕಾರಣ ಹೊಸದೇನೂ ಅಲ್ಲ. ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹಾಗೂ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಅವರ ಹಿರಿಯ ಪುತ್ರಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಬಣದ ನಡುವೆ ಅಸಮಾಧಾನ ಇರುವುದು ಗುಟ್ಟೇನೂ ಅಲ್ಲ. ಹೀಗಾಗಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಬಣದಲ್ಲಿ ಗುರುತಿಸಿಕೊಂಡಿದ್ದ ಸಾಧು ಲಿಂಗಾಯಿತ ಸಮಾಜದ ಬಿ.ಕೆ.ಪ್ರಕಾಶ್ ಅವರ ಬದಲಿಗೆ ಅದೇ ಸಾಧು ಲಿಂಗಾಯಿತ ಸಮಾಜದ ಹಿರಿಯ ನಾಯಕ, ವಕೀಲ ದಿ.ಪಿ.ರಾಮನಗೌಡ ಅವರ ಪುತ್ರ ಪಿ.ಪ್ರೇಮಕುಮಾರಗೌಡ ಅವರನ್ನು ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವಲ್ಲಿ ಪಿ.ಟಿ.ಪರಮೇಶ್ವರನಾಯ್ಕ ಬಣ ಮೇಲುಗೈ ಸಾಧಿಸಿತ್ತು.ಈ ಎಲ್ಲಾ ಕಾರಣಗಳಿಂದಾಗಿಯೇ ಇವತ್ತು ಪಿ.ಟಿ.ಪರಮೇಶ್ವರನಾಯ್ಕ ಬಣದಲ್ಲಿ ಗುರುತಿಸಿಕೊಂಡಿರುವ ಪಿ.ಪ್ರೇಮಕುಮಾರಗೌಡ ಅವರನ್ನು ಹೊರಗಿಟ್ಟು ಚಿಗಟೇರಿ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶನ ಮಾಡುವ ಬದಲು ಭಿನ್ನಮತ ಚುಟುವಟಿಕೆ ನಡೆಸುತ್ತಿರುವುದು ಬಿಜೆಪಿ ಪಾಲಿಗೆ ವರದಾನವಾಗಿದೆ ಎಂದೇ ಹೇಳಬಹುದು. ಬಿ.ಕೆ.ಪ್ರಕಾಶ್ ಅವರ ಅಸ್ಥಿತ್ವಕ್ಕಾಗಿ ಕಾರ್ಯಕರ್ತರ ಸಭೆ ನಡೆಸಲಾಯಿತೋ ಅಥವಾ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದನ್ನು ತೋರಿಸಲು ಸಭೆ ನಡೆಸಲಾಗಿದೆಯೋ ಎಂಬುವುದರ ಬಗ್ಗೆ ಆಯೋಜಕರೇ ಉತ್ತರ ನೀಡಬೇಕಿದೆ.