ಕಾಂಗ್ರೆಸ್‍ನದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದೊಂದು ವಿಜಿಟಿಂಗ್ ಕಾರ್ಡ್

ಭಾಲ್ಕಿ:ಎ.21: ಜನರನ್ನು ಯಾಮಾರಿಸೋ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್‍ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ ಅದೊಂದು ವಿಜಿಟಿಂಗ್ ಕಾರ್ಡ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ಪಟ್ಟಣದ ಗಣೇಶಪೂರ ವಾಡಿ ರಸ್ತೆಯ ಬಯಲು ಪ್ರದೇಶದಲ್ಲಿ ಬಿಜೆಪಿ ವತಿಯಿಂದ ಗುರುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ನೀಡುವುದು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಲ್ಲ, ಅದರಲ್ಲಿ ಹಣವೂ ಇಲ್ಲ, ಅದು ಯಾವ ಪ್ರಯೋಜನಕ್ಕೂ ಬಾರದು ಎಂದರು. ಬಿಜೆಪಿ ಸರಕಾರದಲ್ಲಿ ರಸ್ತೆ, ನೀರಾವರಿ, ಆಸ್ಪತ್ರೆ, ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದೇವೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಈ ಭಾಗದ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಟ್ಟಿದ್ದೇವೆ ಎಂದರು.

ಮೀಸಲಾತಿ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಬರೀ ಮಾತಯೆತ್ತಿದ್ದರೇ ಸಾಮಾಜಿಕ ಬದ್ಧತೆ ಬಗ್ಗೆ ಮಾತನಾಡುವ ಕಾಂಗ್ರೆಸ್ ಬಡ ಜನರು, ದುರ್ಬಲ ವರ್ಗದ ಪರ ಏಕೆ ನಿಲ್ಲಲಿಲ್ಲ ಎಂದು ಪ್ರಶ್ನಿಸಿದರು. ನಾವು ಅಧಿಕಾರಕ್ಕೆ ಬಂದ ಮೇಲೆ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿ ನ್ಯಾಯ ಒದಗಿಸಿದ್ದೇವೆ ಎಂದು ತಿಳಿಸಿದರು.

ಸಜ್ಜನರ-ದುರ್ಜನರ ನಡುವೆ ಸಂಘರ್ಷ

ಕ್ಷೇತ್ರದಲ್ಲಿ ಸಜ್ಜನರ ಮತ್ತು ದುರ್ಜನರ ನಡುವೆ ಸಂಘರ್ಷ ನಡೆದಿದೆ. ಕ್ಷೇತ್ರದ ಶಾಸಕರು 15 ವರ್ಷಗಳ ಕಾಲ ಸ್ವಾರ್ಥ ರಾಜಕಾರಣ ನಡೆಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಪ್ರಕಾಶ ಖಂಡ್ರೆ ಅವರು ಸಜ್ಜನ ಮತ್ತು ಪ್ರಾಮಾಣಿಕ ರಾಜಕಾರಣಿ ಆಗಿದ್ದಾರೆ. ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕಾರ್ಯಕರ್ತರು ಡಬಲ್ ಎಂಜಿನ ಸರಕಾರದ ಸಾಧನೆ ಜನರಿಗೆ ತಿಳಿಸಿ ಈ ಬಾರಿ ಕಮಲ ಅರಳಿಸಬೇಕು ಎಂದು ತಿಳಿಸಿದರು.

ಕೇಂದ್ರದ ಸಚಿವ ಭಗವಂತ ಖೂಬಾ ಮಾತನಾಡಿ, ಕ್ಷೇತ್ರದ ಜನರಿಗೆ ಸುಳ್ಳು ಹೇಳಿ, ಮೋಸ ಮಾಡಿ ಮೂರು ಬಾರಿ ಶಾಸಕರಾಗಿರುವ ಈಶ್ವರ ಖಂಡ್ರೆ ಅವರು ಈ ಬಾರಿ ಬಿಜೆಪಿ ಒಗ್ಗಟ್ಟಿನ ಬಲದಿಂದ ಸೋಲು ಕಾಣಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಮಾತನಾಡಿ, ಈ ಹಿಂದೆಯು ಎರಡು ಅವಧಿಗೆ ಕ್ಷೇತ್ರದ ಶಾಸಕನಾಗಿ ಜನರ ಸೇವೆ ಮಾಡಿದ್ದೇನೆ. ಸಾವಿನಿಂದ ಹೊರ ಬಂದಿರುವ ನನಗೆ ಇದು ಕೊನೆಯ ಚುನಾವಣೆ ಆಗಿದೆ. ಕ್ಷೇತ್ರದ ಮತದಾರರು ಈ ಬಾರಿ ನನ್ನನ್ನು ಆಶೀರ್ವದಿಸಿ ಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಮಾತನಾಡಿ, ಕ್ಷೇತ್ರದ ಶಾಸಕರು ಆಗಿರುವ ಈಶ್ವರ ಖಂಡ್ರೆ ಅವರು ಅಭಿವೃದ್ಧಿ ಮಾಡಿದ್ದರೇ ಸೀರೆ ಹಂಚುವ ಪರಿಸ್ಥಿತಿ ಏಕೆ ಬರುತ್ತಿತ್ತು ಎಂದು ಪ್ರಶ್ನಿಸಿದ ಅವರು, ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಬಿಜೆಪಿಯನ್ನು ಗೆಲ್ಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ನೀಲಂಗಾದ ಶಾಸಕ ಸಂಭಾಜೀ ಪಾಟೀಲ್, ಮರಾಠಾ ನಿಗಮ ಮಂಡಳಿ ಅಧ್ಯಕ್ಷ ಮಾರುತಿರಾವ ಮೂಳೆ, ಡಾ.ದಿನಕರ ಮೋರೆ, ಜರ್ನಾಧನರಾವ ಬಿರಾದಾರ್ ಕಿಶನರಾವ ಪಾಟೀಲ್ ಇಂಚೂರಕರ್, ಯಾದವರಾವ ಕನಸೆ, ಬಾಬುರಾವ ಕಾರಬಾರಿ, ಪ್ರಸನ್ನ ಖಂಡ್ರೆ, ಶಿವು ಲೋಖಂಡೆ, ವೀರಣ್ಣ ಕಾರಬಾರಿ, ಲುಂಬಿಣಿ ಗೌತಮ, ಪಂಡಿತ ಶಿರೋಳೆ, ಗೋವಿಂದರಾವ ಬಿರಾದಾರ್, ಅನಿಲ ಶಿಂಧೆ, ಬಸವರಾಜ ಮನಮೊಳೆ, ಕಿರಣ ಪಾಟೀಲ್, ಅನಿಲ ಭೋಸಾರೆ,

ಪಂಡಿತ ಶಿರೋಳೆ ಸ್ವಾಗತಿಸಿದರು. ಶಿವರಾಜ ಗಂದಗೆ ನಿರೂಪಿಸಿದರು