ಕಾಂಗ್ರೆಸ್‍ದ್ದು ಮುಸ್ಲಿಂ ಲೀಗ್ ಪ್ರಣಾಳಿಕೆ: ಪ್ರಧಾನಿ ಹೇಳಿಕೆಗೆ ಗಣಿಹಾರ ಟೀಕೆ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.10: ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯನ್ನು ಮುಸ್ಲೀಂ ಲೀಗ್ ಪ್ರಣಾಳಿಕೆ ಎಂದು ಪ್ರಧಾನಿ ಮೋದಿ ಟೀಕಿಸಿರುವುದನ್ನು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲೀಂ ಲೀಗ್ ಜೊತೆ ಸೇರಿ ಜನಸಂಘ ಸರ್ಕಾರ ರಚನೆ ಮಾಡಿದ್ದು ಮೋದಿ ಅವರು ಮರೆತಂತೆ ಕಾಣುತ್ತಿದೆ.. ಮುಸ್ಲಿಂ ಪರವಾದ ಒಂದೇ ಒಂದು ಅಕ್ಷರವೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇಲ್ಲ. ಆದಾಗ್ಯೂ ಪ್ರಧಾನಿ ಅದನ್ನು ಮುಸ್ಲೀಂ ಲೀಗ್ ಪ್ರಣಾಳಿಕೆ ಎಂದು ಟೀಕೆ ಮಾಡಿದ್ದು ಅವರ ಘನತೆ ಗೌರವಕ್ಕೆ ಶೋಭಿಸದು ಎಂದು ಟೀಕಿಸಿದರು.
ಮುಸ್ಲಿಂ ಲೀಗ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಒಂದು ಸಂಸ್ಥೆ, ಇದೇ ಮುಸ್ಲಿಂ ಲೀಗ್ ಜೊತೆ ಪಶ್ಚಿಮ ಬಂಗಾಳದಲ್ಲಿ, ಸಿಂಧ ಪ್ರಾಂತ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದು ಬಹುಶ: ಪ್ರಧಾನಿ ಮರೆತಂತೆ ಕಾಣುತ್ತಿದೆ ಎಂದು ಹೇಳಿದರು.
ಈ ಬಾರಿ ಬಿಜೆಪಿಗೆ ಸೋಲಿನ ಅರಿವಾಗಿದೆ. ಆದ್ದರಿಂದ ಹತಾಶೆಯಾಗಿ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರುತ್ತಿರುವ ನಗರ ಶಾಸಕ ಯತ್ನಾಳ ಅವರು ಇಂದು ಬೆಳೆದಿರುವುದೇ ಅಲ್ಪಸಂಖ್ಯಾತರಿಂದ ಎಂಬುದನ್ನು ಮರೆಯಬಾರದು. ಮಣಿಪುರದಲ್ಲಿ ಸ್ತ್ರೀಯ ಮೇಲೆ ನಡೆದ ದೌರ್ಜನ್ಯವನ್ನು ಮೋದಿ, ಯತ್ನಾಳ ಏಕೆ ವಿರೋಧಿಸಲಿಲ್ಲ, ಆ ಮಹಿಳೆ ಹಿಂದೂ ಅಲ್ಲವೇ ? ಎಂದು ಪ್ರಶ್ನಿಸಿದರು.
ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಏನು ಸಾಧನೆ ಮಾಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಏನು ಸಾಧನೆ ಮಾಡಿತ್ತು ಎನ್ನುವ ಕುರಿತು ಬಹಿರಂಗ ಚರ್ಚೆಗೆ ಬರಲಿ ನೋಡೋಣ ಎಂದರು.
ಕಾಂಗ್ರೆಸ್ ಮುಖಂಡ ಡಾ. ರವಿಕುಮಾರ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.