ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ: ಖರ್ಗೆ ವಿಶ್ವಾಸ

ಕಲಬುರಗಿ,ಮೇ.10-ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಲಭಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಬಸವನಗರದ ಮತಗಟ್ಟೆ ಕೇಂದ್ರದಲ್ಲಿ ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕಾಂಗ್ರೆಸ್ ಪರವಾದ ಅಲೆ ಇದೆ. ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಿಗಲಿದೆ ಎಂದರು.
ಕಳೆದ 1967 ರಿಂದ ಬಸವನಗರದ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡುತ್ತ ಬಂದಿದ್ದೇನೆ. ಇಲ್ಲಿಯವರೆಗೆ 27 ರಿಂದ 28 ಬಾರಿ ಮತದಾನ ಮಾಡಿರಬಹುದು. ಇಲ್ಲಿನ ಜನರ ಪ್ರೀತಿ-ವಿಶ್ವಾಸ ದೊಡ್ಡದು, ಅವರ ಪ್ರೀತಿ-ವಿಶ್ವಾಸ ಮರೆಯಲು ಸಾಧ್ಯವಿಲ್ಲ ಎಂದರು.