ಕಾಂಗ್ರೆಸ್‌ಗೆ ಮತ ಕೇಳುವ ನೈತಿಕತೆ ಇಲ್ಲ

ಕೋಲಾರ,ಮೇ,೬:ಅಂಬೇಡ್ಕರ್ ಪರಿಶಿಷ್ಟರೆಂಬ ಕಾರಣಕ್ಕೆ ಅವರ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದ ಹಾಗೂ ಬಲಿಜ ಸಮುದಾಯಕ್ಕಿದ್ದ ೨ಎ ಮೀಸಲಾತಿ ತೆಗೆದು ಹಾಕಿದ ಕಾಂಗ್ರೆಸ್ ಪಕ್ಷ ಯಾವ ನೈತಿಕತೆಯಡಿ ದಲಿತ,ಬಲಿಜ ಸಮುದಾಯದ ಮತ ಕೇಳುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಪ್ರಶ್ನಿಸಿದರು.
ನಗರದ ೨ನೇ ವಾರ್ಡಿನ ಗಾಂಧಿನಗರದಲ್ಲಿ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ಪರವಾಗಿ ಬೃಹತ್ ರೋಡ್‌ಶೋ ನಡೆಸಿದ ಅವರು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ನಾಗರೀಕರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಚುನಾವಣೆ ಬಂದರೆ ಅಂಬೇಡ್ಕರ್ ಹೆಸರೇಳುವ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಬದುಕಿದ್ದಾಗ ಅವರನ್ನು ಸಂಸದರಾಗಿ ಆಯ್ಕೆ ಮಾಡಲು ಅಡ್ಡಿಪಡಿಸಿತು, ಕಾಂಗ್ರೆಸ್‌ನ ನಾಯಕರ ಅಂತ್ಯ ಸಂಸ್ಕಾರಕ್ಕೆ ನೂರಾರು ಎಕರೆ ಜಾಗ ಕಬಳಿಸಿದ ಇವರಿಗೆ ಈ ದೇಶಕ್ಕೆ ಸಂವಿಧಾನ ನೀಡಿದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡಲು ಮನಸ್ಸು ಬರಲಿಲ್ಲ ಆದರೆ ಈಗ ದಲಿತರ ಮತಗಳು ಬೇಕೆ ಎಂದು ಪ್ರಶ್ನಿಸಿದರು.
ಬಲಿಜ ಸಮುದಾಯದ ಅಭಿವೃದ್ದಿ ಬಿಜೆಪಿಯಿಂದ ಮಾತ್ರ ಎಂಬ ಸತ್ಯ ಈ ಸಮುದಾಯಕ್ಕೆ ಗೊತ್ತಿದೆ, ಬಲಿಜ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ೨ಎ ಮೀಸಲಾತಿ ನೀಡಿದ್ದು ಯಡಿಯೂರಪ್ಪ ಸರ್ಕಾರ, ಬಲಿಜ ಅಭಿವೃದ್ದಿ ನಿಗಮ ಸ್ಥಾಪನೆ, ಕೈವಾರ ಯೋಗಿ ನಾರೇಯಣರ ಯತೀಂದ್ರರ ಅಧ್ಯಯನ ಪೀಠ ಮಾಡಿದ್ದು ಬಿಜೆಪಿ ಸರ್ಕಾರ ಈ ಸತ್ಯ ಅರಿತು ಈ ಸಮುದಾಯಗಳು ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.
ಟವರ್‌ನಲ್ಲಿ ಧ್ವಜ
ಹಾರಿಸಿದ್ದು ಬಿಜೆಪಿ

ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಆರ್. ವರ್ತೂರ್ ಪ್ರಕಾಶ್ ರವರಿಗೆ ನಿಮ್ಮ ಮತ ಕೊಟ್ಟು ಜಯಶೀಲರನ್ನಾಗಿ ಮಾಡಿದರೆ ಇದೇ ತಿಂಗಳು ೧೫ ನೇ ತಾರೀಖು ಸಚಿವರಾಗಿ ಕೋಲಾರಕ್ಕೆ ಬರುತ್ತಾರೆ ಕೋಲಾರ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂದು ಘೋಷಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಕ್ಲಾಕ್ ಟವರ್ ನಲ್ಲಿ ನಮ್ಮ ಭಾರತದ ಧ್ವಜವನ್ನು ಹಾರಿಸಲು ಸಾಧ್ಯವಾಗಲಿಲ್ಲ.ಬಾವುಟ ಹಾರಿಸಲು ಬಿಜೆಪಿ ಬರಬೇಕಾಯಿತು. ಕೋಲಾರದಲ್ಲಿ ನಮ್ಮ ಭಾರತದ ಧ್ವಜವನ್ನು ಹಾರಿಸಲು ಇಷ್ಟು ವರ್ಷಗಳು ಬೇಕಾಯಿತು. ಬಿಜೆಪಿ ಭರವಸೆ ಕೊಟ್ಟು ಕೇವಲ ಅಧಿಕಾರ ಪಡೆದು ಸುಮ್ಮನಿರುವ ಪಕ್ಷ ಅಲ್ಲ. ಕೊಟ್ಟ ಮಾತನ್ನು ಈಡೇರಿಸುವುದೇ ಬಿಜೆಪಿಯ ಧ್ಯೇಯವೆಂದರು.
ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ವರ್ಷಕ್ಕೆ ಉಚಿತವಾಗಿ ಮೂರು ಸಿಲಿಂಡರ್ , ಉಚಿತವಾಗಿ ಪ್ರತಿ ದಿನ ಅರ್ಧ ಲೀಟರ್ ಹಾಲು, ಬಡ ಕೂಲಿ ಕಾರ್ಮಿಕ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ ಪ್ರಮುಖವಾಗಿ ನೀಡುತ್ತೇವೆಂದರು.
ನಗರಸಭಾ ಸದಸ್ಯ ಪ್ರವೀಣ್ ಗೌಡ, ಜಿಪಂ ಮಾಜಿ ಸದಸ್ಯೆ ರೂಪಶ್ರೀ,ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಬಂಕ್ ಮಂಜುನಾಥ್, ವೆಂಕಟೇಶ್,ಮಹೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.