ಕಾಂಗ್ರೆಸ್‌ಗೆ ಜೆಡಿಎಸ್ ಸಾಟಿಯಲ್ಲ, ಬಿಜೆಪಿಯೇ ಎದುರಾಳಿ: ಶ್ರೀದೇವಿ

ದೇವದುರ್ಗ,ಏ.೧೮- ಕಾಂಗ್ರೆಸ್‌ಗೆ ದಿ.ಎ.ವೆಂಕಟೇಶ ನಾಯಕ ಕುಟುಂಬ ೪೦ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದು, ನಮ್ಮ ಕುಟುಂಬಕ್ಕೆ ಕಾಂಗ್ರೆಸ್ಸೇ ಜೀವಾಳವಾಗಿದೆ. ಮಾಜಿ ಸಂಸದ ಬಿ.ವಿ.ನಾಯಕ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಕಾರ್ಯಕರ್ತರ್‍ಯಾರೂ ಎದೆಗುಂದಬಾರದು ಎಂದು ಅಭ್ಯರ್ಥಿ ಶ್ರೀದೇವಿ ರಾಜಶೇಖರ ನಾಯಕ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. ನಮ್ಮ ತಾತ ಎ.ವೆಂಕಟೇಶ ನಾಯಕ ೩೦ವರ್ಷ ರಾಜಕೀಯ ಜೀವನದಲ್ಲಿ ಎಂದಿಗೂ ಕಾರ್ಯಕರ್ತರನ್ನು ಕೈಬಿಟ್ಟಿಲ್ಲ. ಮಾಜಿ ಸಂಸದ ಬಿ.ವಿ.ನಾಯಕ ಬೇರೆಪಕ್ಷ ಸೇರುತ್ತಾರೆ ಎನ್ನುವುದು ಸುಳ್ಳುಸುದ್ದಿ. ಇದನ್ನು ಯಾರೂ ನಂಬಬಾರದು. ನಾಳೆಯಿಂದ ನಮ್ಮ ಮಾವ ಬಿ.ವಿ.ನಾಯಕ ನನ್ನ ಪರ ಪ್ರಚಾರ ಮಾಡಲಿದ್ದಾರೆ. ಎಲ್ಲ ಊಹಾಪೋಹಾಗಳಿಗೆ ತೆರೆ ಎಳೆಯಲಿದ್ದಾರೆ ಎಂದರು.
ಮೊದಲನಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಸ್ಪರ್ಧೆಯಿದ್ದು ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ನಾಯಕರು, ಕಾರ್ಯಕರ್ತರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡು ಗೆಲ್ಲುವ ಹಗಲುಗನಸು ಕಾಣುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು ರಾಜ್ಯದಲ್ಲಿ ೧೫೦ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ. ನಮ್ಮಲ್ಲಿ ಕಾಂಗ್ರೆಸ್ ಅಲೆಯಿದ್ದು ದೊಡ್ಡಮಟ್ಟದ ಕಾರ್ಯಕರ್ತರ ಪಡೆಯಿದೆ. ಅವರ ಶಕ್ತಿಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನಮಗೆ ಎದುರಾಳಿ ಬಿಜೆಪಿ ಹೊರತು ಜೆಡಿಎಸ್ ಅಲ್ಲ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಶರಣಗೌಡ ಗೌರಂಪೇಟೆ, ಶಿವಪ್ಪ ಪಲಕನಮರಡಿ, ಶಂಕರಗೌಡ ಮದರಕಲ್, ಲಕ್ಷ್ಮಣಜ್ಯೋತಿ, ಸಿದ್ದಯ್ಯ ತಾತ ಗುರುವಿನ, ಶಿವನಗೌಡ ಗೌರಂಪೇಟೆ ಇತರರಿದ್ದರು.