ಕಾಂಗ್ರೆಸ್‌ಗೆ ಐಟಿ-ಇಡಿ ಭಯ ಸಿಎಂ ತಿರುಗೇಟು

ಬೆಂಗಳೂರು, ಮೇ. ೫- ಕಾಂಗ್ರೆಸ್‌ನವರ ಬಳಿ ಕಳ್ಳ ಹಣ ಇಲ್ಲ ಎಂದ ಮೇಲೆ ಐಟಿ-ಇಡಿ ಭಯ ಏಕೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.ಐಟಿ-ಇಡಿ ಮೂಲಕ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ನಾಯಕರ ವಿರುದ್ಧ ದಾಳಿ ನಡೆಸಲು ಐಟಿ ಅಧಿಕಾರಿಗಳು ಬೆಂಗಳೂರಿಗೆ ಬಂದಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಕಿಡಿಕಾರಿದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಕಳ್ಳನ ಜೀವ ಉಳ್ಳೊಳ್ಳಗೆ ಅಂತಾರಲ್ಲ ಹಾಗೆ ಕಾಂಗ್ರೆಸ್‌ನವರು ಕಳ್ಳತನ ಮಾಡಿದ್ದಾರೆ. ಅದಕ್ಕೆ ಈ ರೀತಿ ಭಯ ಬೀಳುತ್ತಿದ್ದಾರೆ ಎಂದರು.
ಚುನಾವಣಾ ಆಯೋಗ ಸ್ವಾಯತತ್ತೆ ಸಂಸ್ಥೆ. ಆಯೋಗದ ಅಧೀನದಲ್ಲೇ ಎಲ್ಲವೂ ನಡೆಯುತ್ತದೆ. ಅಧಿಕೃತವಾಗಿ ಶಿಷ್ಟಾಚಾರದಂತೆ ಐಟಿ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲೂ ಈಗಾಗಲೇ ಇದ್ದಾರೆ. ಚುನಾವಣಾ ಆಯೋಗದ ಸೂಚನೆಯಂತೆ ದಾಳಿಗಳು ನಡೆಯುತ್ತಿವೆ. ಹಣ, ಚಿನ್ನ, ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ನವರು ಐಟಿ ದಾಳಿ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಯಾಕೆ ಮುಟ್ಟಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.ಬಿಜೆಪಿಯನ್ನು ಹೊಣೆ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಆರೋಪಗಳು ಸರಿಯಲ್ಲ. ಯಾರೂ ಕಳ್ಳರಿದ್ದರೋ ಅವರು ಸಿಕ್ಕಿಕೊಳ್ಳುತ್ತಾರೆ. ಐಟಿ ರೇಡ್‌ಗೂ ಬಿಜೆಪಿಗೂ ಸಂಬಂಧವಿಲ್ಲ ಎಂದರು.ಬಿಜೆಪಿ ಸೋಲುವ ಭೀತಿಯಿಂದ ದಾಳಿ ಮಾಡಿಸುತ್ತಿದ್ದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿ ಗೆಲ್ಲುವುದು ನಿಶ್ಚಿತ. ಕಾಂಗ್ರೆಸ್ ಸೋಲುವುದೂ ಖಚಿತ ಎಂದರು.
ಐಟಿ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಲು ಕಾಂಗ್ರೆಸ್‌ನವರು ದಾಳಿಗೆ ಮುಂಚಿತವಾಗಿಯೇ ಈ ರೀತಿ ಹೇಳಿಕೆ ನೀಡಿ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ತಂತ್ರ ನಡೆಸಿದ್ದಾರೆ. ಇದೆಲ್ಲಾ ನಡೆಯಲ್ಲ, ಯಾರ ಬಳಿ ಕಳ್ಳ ಹಣ ಇದೆಯೋ ಅವರು ಸಿಕ್ಕಿ ಬೀಳುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ನಟ ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಡದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಸುದೀಪ್ ಸೇರ್ಪಡೆ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ ಎಂದಷ್ಟೇ ಹೇಳಿದರು.
ನಟ ಸುದೀಪ್ ಇಂದು ಬಿಜೆಪಿ ಸೇರುತ್ತಿದ್ದಾರಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳು ಸ್ಪಷ್ಟ ಉತ್ತರ ನೀಡದೆ, ಆ ಬಗ್ಗೆ ಚರ್ಚೆ ನಡೆದಿದೆ. ಮಧ್ಯಾಹ್ನ ನಡೆಯುವ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಹೇಳುತ್ತೇನೆ. ಅಲ್ಲಿಯವರೆಗೂ ಕಾಯಿರಿ ಎಂದು ಹೇಳುವ ಮೂಲಕ ಸುದೀಪ್ ಬಿಜೆಪಿ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಾರೆ ಎಂಬ ಸುಳಿವನ್ನು ನೀಡಿದರು.