
ಬೆಂಗಳೂರು, ಜು.೮-ನಿಮ್ಮ ಮನೆ, ಅಂಗಡಿ, ಪಾರ್ಕು, ಗಲ್ಲಿಗಳ ಸಂದಿಗೊಂದಿಗಳಲ್ಲಿ ಯಾರಾದರೂ ಕಸ ಸುರಿಯುತ್ತಿರುವುದನ್ನು ಕಂಡರೆ ತಕ್ಷಣ ಅದರ, ಅವರ ಫೋಟೋ ಅಥವಾ ವಿಡಿಯೋ ತೆಗೆದುಬಿಡಿ. ನಿಮ್ಮ ಜೇಬಿಗೆ ೨ ಸಾವಿರ ಬಂದಂತೆ.
ಹೌದು, ನಗರದಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಯುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆ ಹಳೇಯ ಯೋಜನೆ ಮುಂದುವರೆಸಿದೆ. ಇಲ್ಲಿನ ನಾಗರಬಾವಿ ಸರ್ವೀಸ್ ರಸ್ತೆಯಲ್ಲಿ ಕಸ ಹಾಕಿದವರನ್ನು ಹಿಡಿದು ಕೊಟ್ಟವರಿಗೆ ಬಿಬಿಎಂಪಿ ಬಹುಮಾನ ಘೋಷಣೆ ಮಾಡಿ ಫಲಕ ಹಾಕಿದೆ.
ಕಸದ ಬಗ್ಗೆ ಫೋಟೋ, ವಿಡಿಯೋವನ್ನು ಅಧಿಕಾರಿಗಳಿಗೆ ಕಳುಹಿಸಿ ದೂರು ನೀಡುವವರಿಗೆ ಗರಿಷ್ಠ ೨೦೦೦ ರೂಪಾಯಿ ಬಹುಮಾನ ಮತ್ತು ಕಸ ತಂದು ಸುರಿಯುವವರಿಗೆ ೨೦೦೦ ರೂಪಾಯಿ ದಂಡ ವಿಧಿಸುವುದಾಗಿ ಬಿಬಿಎಂಪಿ ಘೋಷಣೆ ಮಾಡಿದೆ
ಈಗಾಗಲೇ ಈ ಯೋಜನೆ ಆರಂಭದಲ್ಲಿ
ಬಹುಮಾನ ಗಿಟ್ಟಿಸಿಕೊಂಡವರು ನವರಸ ನಾಯಕ ಜಗ್ಗೇಶ್. ಕಾಡು ಮಲ್ಲೇಶ್ವರ ವಾರ್ಡ್ ವ್ಯಾಪ್ತಿಯ ಎಂಕೆಕೆ ರಸ್ತೆಯ ರೈಲು ಕೆಳಮಾರ್ಗದಲ್ಲಿ ಲಾರಿಯೊಂದರಿಂದ ತ್ಯಾಜ್ಯ ಸುರಿಯುವುದನ್ನು ಗಮನಿಸಿದ ಜಗ್ಗೇಶ್, ತಕ್ಷಣವೇ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದರು.ಆಗ ಅನಧಿಕೃತವಾಗಿ ಕಸ ಬಿಸಾಕಿದ ಆರೋಪದ ಮೇಲೆ ಬಸವರಾಜು ಎಂಬುವರಿಂದ ೧೦,೦೦೦ ರೂ. ದಂಡ ವಸೂಲಿ ಮಾಡಲಾಗಿತ್ತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.ಬೃಹತ್ ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಅಕ್ರಮವಾಗಿ ಸುಮಾರು ೧೦ ಸಾವಿರ ಟನ್ ಕಸವನ್ನು ಬೆಕಾಬಿಟ್ಟಿಯಾಗಿ ಸುರಿಯಲಾಗುತ್ತಿದೆ. ಈ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಸುಮಾರು ೧೦೦ಗೂ ಅಧಿಕ ಕೋಟಿ ಖರ್ಚು ಮಾಡುತ್ತಿದೆ. ಹಾಗಾಗಿ ಕಸ ನಿರ್ವಹಣೆ, ನಿಯಂತ್ರಣ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸಾರ್ವಜನಿಕರು ಅನಧಿಕೃತವಾದ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದರೆ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು.
- ಕೇಂದ್ರ ಕಚೇರಿ- (೦೮೦)೨೨೨೨ ೧೧೮೮/ ೨೨೯೭೫೫೯೫
- ಪೂರ್ವ- ೨೨೯೭ ೫೮೦೩
- ಪಶ್ಚಿಮ- ೨೩೪೬ ೩೩೬೬
*ದಕ್ಷಿಣ- ೨೬೫೬ ೬೩೬೨
*ಬ್ಯಾಟರಾಯನಪುರ- ೨೩೬೩ ೬೬೭೧
*ಮಹದೇವಪುರ- ೨೮೫೧ ೨೩೦೦
*ಬೊಮ್ಮನಹಳ್ಳಿ- ೨೫೭೩ ೫೬೪೨
*ರಾಜರಾಜೇಶ್ವರಿನಗರ- ೨೮೬೦ ೦೯೫೪
*ದಾಸರಹಳ್ಳಿ- ೨೮೩೯ ೩೬೮೮.