ಕಸ ಸಂಗ್ರಹ ವಾಹನಗಳಿಗೆ ಚಾಲನೆ

ಚಿತ್ರದುರ್ಗ, ಮಾ.೩೧;  ನಗರಸಭೆಗೆ ಸ್ವಚ್ಛ ಭಾರತ್ ಮಿಷನ್ ಅನುದಾನದಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಖರೀದಿಸಿದ ವಿವಿಧ ವಾಹನಗಳಿಗೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಚಿತ್ರದುರ್ಗ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಘನತ್ಯಾಜ್ಯ ವಿಲೇವಾರಿ ವಾಹನಗಳ ಅವಶ್ಯಕತೆ ತುಂಬಾ ಇದೆ. ರೂ.78 ಲಕ್ಷ ವೆಚ್ಚದಲ್ಲಿ 13 ಆಟೋ ಟಿಪ್ಪರ್, ರೂ.45 ಲಕ್ಷದ 03 ಮಿನಿ ಟಿಪ್ಪರ್, ರೂ.24 ಲಕ್ಷದ 01 ಟಿಪ್ಪರ್, ರೂ.26 ಲಕ್ಷದ 01 ಜೆಸಿಬಿ, ರೂ.15 ಲಕ್ಷದ 03 ಟ್ರಾಕ್ಟರ್ ಹಾಗೂ ರೂ.7.50 ಲಕ್ಷ ವೆಚ್ಚದ 03 ಟ್ರೈಲರ್ ಸೇರಿದಂತೆ ಒಟ್ಟು ರೂ.1.95 ಕೋಟಿ ಅನುದಾನದಲ್ಲಿ ವಿವಿಧ ವಾಹನಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು.
ಚಿತ್ರದುರ್ಗ ನಗರದಲ್ಲಿ ಮನೆ ಮನೆ ಕಸ ಸಂಗ್ರಹಕ್ಕಾಗಿ ಈಗಾಗಲೇ 29 ವಾಹನಗಳು ಇವೆ. ಇದರ ಜೊತೆಗೆ ಹೊಸದಾಗಿ 13 ವಾಹನಗಳು ಸೇರಿವೆ. ನಗರದಲ್ಲಿ ವಾರ್ಡ್‍ವಾರು ಕಸ ವಿಲೇವಾರಿ ಮಾಡಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನಗರದ ನಾಗರಿಕರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಮಿಕರಿಗೆ ಟೂಲ್‍ಕಿಟ್ ವಿತರಣೆ: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅರ್ಹ ನೋಂದಾಯಿತ ಕಾರ್ಮಿಕರಿಗೆ ವಿವಿಧ ವೃತ್ತಿಗಳ ಟೂಲ್ ಕಿಟ್ ವಿತರಿಸಲಾಯಿತು.
 ಈ ಸಂದರ್ಭದಲ್ಲಿ ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ವೇತಾ ವಿರೇಶ್, ನಗರಸಭೆ ಸದಸ್ಯರಾದ ಪಿ.ಕೆ. ಮೀನಾಕ್ಷಿ, ತಾರಕೇಶ್ವರಿ, ಭಾಗ್ಯಮ್ಮ, ಹರೀಶ್, ಸುರೇಶ್, ಭಾಸ್ಕರ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ, ನಗರಸಭೆ ಪೌರಾಯುಕ್ತ ಜೆ.ಟಿ.ಹನುಂತರಾಜು, ವ್ಯವಸ್ಥಾಪಕಿ ಮಂಜುಳಾ ಸೇರಿದಂತೆ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.