ಕಸ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಒತ್ತಾಯಿಸಿ ಗ್ರಾಮಸ್ಥರ ಬೃಹತ್ ಪ್ರತಿಭಟನೆ 

ಸಂಜೆವಾಣಿ ವಾರ್ತೆ

ದಾವಣಗೆರೆ: ಕಸ ವಿಲೇವಾರಿ ಘಟಕದಿಂದ ತುಂಬಾ ಸಮಸ್ಯೆಯಾಗುತ್ತಿದ್ದು, ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ವಿಲೇವಾರಿ ಘಟಕ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಆವರಗೊಳ್ಳ ಗ್ರಾಮದಲ್ಲಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು. ದಾವಣಗೆರೆ ಸಮೀಪದ ಆವರಗೊಳ್ಳ ಗ್ರಾಮದಲ್ಲಿ ಪಾಲಿಕೆ ಕಸ ವಿಲೇವಾರಿ ಘಟಕ ಆದ ಮೇಲೆ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿದೆ. ಸುಮಾರು ಮೂವತ್ತು ಎಕರೆ ಪ್ರದೇಶದಲ್ಲಿ ಶೇಖರಣೆ ಆಗಿರುವ ಕಸದ ಕೊಂಪೆಗೆ ಬೆಂಕಿ ತಗುಲಿದ್ದು ಆ ಬೆಂಕಿ ಗ್ರಾಮಗಳಿಗೆ ಆವರಿಸೋ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆವರಗೊಳ್ಳ ಗ್ರಾಮದಲ್ಲಿ ಮಹಾನಗರ ಪಾಲಿಕೆ ಹಲವು ವರ್ಷಗಳಿಂದ ಕಸ ವಿಲೇವಾರಿ ಘಟಕದಲ್ಲಿ ಕಸ ಡಂಪಿಂಗ್ ಮಾಡುತ್ತಿದೆ. ಆದರೆ, ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಮೂವತ್ತು ಎಕರೆಯಲ್ಲಿ ಕಸದ ಗುಡಕ್ಕೆ ಬೆಂಕಿ ಆವರಿಸಿದೆ. ಎಷ್ಟೆ ಪ್ರಯತ್ನ ಪಟ್ಟರೂ ಬೆಂಕಿ ನಂದಿಸಲು ಆಗುತ್ತಿಲ್ಲ. ಈ ಬೆಂಕಿ ಇನ್ನೂ ಎರಡು ತಿಂಗಳವರೆಗೆ ಮುಂದುವರೆಯಲಿದ್ದು, ಇದರಿಂದ ಆವರಗೊಳ್ಳ, ಕಕ್ಕರಗೊಳ್ಳ, ಕಲ್ಪನಹಳ್ಳಿ, ಮಾಗನಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಜೀವ ಭಯದಲ್ಲಿಯೇ ಜೀವನ ನಡೆಸುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಬೆಂಕಿ ರುದ್ರ ನರ್ತನದಿಂದ ಐದಾರು ಗ್ರಾಮಗಳಿಗೆ ತೊಂದರೆ ಆಗುತ್ತಿದೆ. ಕಸವಿಲೇವಾರಿ ಘಟಕದ ಪಕ್ಕದಲ್ಲೇ ರೈತರ ಜಮೀನುಗಳಿದ್ದು ತೆಂಗಿನ ಗಿಡಗಳು ಬೆಂಕಿಗೆ ಆಹುತಿಯಾಗಿದ್ದು ಭತ್ತದ ಗದ್ದೆಗಳ ಮೇಲೆಲ್ಲಾ ಬೂದಿ ಆವರಿಸಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಅಷ್ಟೇ ಅಲ್ಲದೇ ಕಸವಿಲೇವಾರಿ ಘಟಕದಿಂದ ಕೂಗಳತೆ ದೂರದಲ್ಲೇ ಅವರಗೊಳ್ಳ ಗ್ರಾಮವಿದ್ದು ಎಲ್ಲಿ ಗ್ರಾಮಕ್ಕೆ ಬೆಂಕಿ ಆವರಿಸುತ್ತೋ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ, ಭತ್ತದ ಬಣವೆಗಳಿಗೆ ಬೆಂಕಿ ತಗಲುವ ಆತಂಕ ಇದೆ, ಬಿರುಬಿಸಿಲು ಇರೋದ್ರಿಂದ ಬೆಂಕಿ ಹೆಚ್ಚಾಗ ತೊಡಗಿದ್ದು ಮನೆಗಳಿಗೂ ಬೆಂಕಿ ತಗಲು ಬಹುದು, ಇಡೀ ಗ್ರಾಮಕ್ಕೆ ಬೆಂಕಿ ತಗುಲಿದರೆ ಮುಂದೆ ಗತಿ ಏನೂ ಅನ್ನೋ ಭಯದಲ್ಲಿ ಗ್ರಾಮಸ್ಥರಿದ್ದಾರೆ ಎಂದು ಹೇಳಿದರು. ಮಹಾನಗರ ಪಾಲಿಕೆ ಕಣ್ಣಿದ್ದು ಕುರುಡನ ರೀತಿ ವರ್ತಿಸುತ್ತಿದೆ, ದೊಡ್ಡ ಸಿಟಿ ದಾವಣಗೆರೆಯ ಕಸ ಎಲ್ಲವು ಈ ಘಟಕದಲ್ಲಿ ಡಂಪ್ ಆಗುತ್ತೆ, ಇಷ್ಟಿದ್ದರೂ ಇಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನ ಬಳಸಿಲ್ಲ, ಬೆಂಕಿ ನಂದಿಸಲು ಅಗ್ನಿಶಾಮಕ ತಂತ್ರಜ್ಞಾನ ಇಲ್ಲ, ಸರಿಯಾದ ನೀರಿನ ವ್ಯವಸ್ಥೆ ಇಲ್ಲ, ಕಸ ಘಟಕವೂ ಕಸವೇ ಆಗಿ ಹೋಗಿದೆ, ಸುತ್ತಾ ಕೆಟ್ಟ ವಾಸನೆ ಬರುತ್ತಿದ್ದರೂ ವಾಸನೆ ನಿಯಂತ್ರಣಕ್ಕೆ ಕ್ರಮ‌ ವಹಿಸದೇ ಪಾಲಿಕೆ ಕಣ್ಮುಚ್ಚಿ ಕುಳಿತಿದೆ, ಇನ್ನೂ ಸ್ಥಳಕ್ಕೆ ಪಾಲಿಕೆ ಆಯುಕ್ತೆ ರೇಣುಕಾ ಆಗಮಿಸಿ ಹಾರಿಕೆ ಉತ್ತರ ನೀಡಿ ಹೋಗಿದ್ದು, ಇತ್ತ ಕಸ ವಿಲೇವಾರಿ ಘಟಕವನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಇನ್ನು ಪ್ರತಿಭಟನೆಯಲ್ಲಿ ಮಾತನಾಡಿದ ಆವರಗೊಳ್ಳದ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅವರು. ಈ ಕಸದಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರೈತರ ಜಮೀನುಗಳು ಇದ್ದರೂ ಸಹ ಬೆಳೆಗಳನ್ನು ಬೆಳೆಯಲು ಆಗುತ್ತಿಲ್ಲ. ಎಲ್ಲಾ ರೀತಿಯಲ್ಲಿ ಈ ಕಸದಿಂದ ರೈತರಿಗೆ ತೊಂದರೆ ಆಗುತ್ತಿದೆ. ಮೊನ್ನೆ ಬೆಂಕಿ‌ ಬಿದ್ದಿರುವುದು ಇದೇ ಮೊದಲಲ್ಲ. ಸುಮಾರು ಬಾರಿ ಬೆಂಕಿ ಬಿದ್ದಿದೆ. ಜನಪ್ರತಿನಿಧಿಗಳ ಗಮನ ಸೆಳೆಯುವುದಕ್ಕೆ ಆ ವೀರಭದ್ರ ಸ್ವಾಮಿ ಕೃಪೆಯಿಂದ ಬೆಂಕಿ ಬಿದ್ದದೆ ಅಂದ್ರೆ ತಪ್ಪಾಗಲಾರದು. ಡಾಪಿಂಗ್ ಯಾರ್ಡ್ ತೆರೆವು ಮಾಡಬೇಕು ಎಂದು ಒತ್ತಾಯಿಸಿದರು. ಇದು ಪಕ್ಷಾತೀತ ಹೋರಾಟ. ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ಮುಂಬರುವ ದಿನಗಳಲ್ಲಿ ಉಗ್ರ ಸ್ವರೂಪ ಪಡೆಯುತ್ತದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯೇ ಹೊಣೆ ಹೊರಬೇಕಾಗುತ್ತದೆ. ಮಾತ್ರವಲ್ಲ, ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೂಡಲೇ ಕೇಸ್ ವಾಪಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಕಸದ ಗಾಡಿಗಳು ಬರಬಾರದು. ಇಲ್ಲಿ ಕಸ ಹಾಕಬಾರದು. ಇದು ನಮ್ಮ ಬೇಡಿಕೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಆವರಗೊಳ್ಳ ಗ್ರಾಮದ ಮುಖಂಡ ವೀರೇಶ್, ನಾಗರಾಜ್, ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.