ಕಸ ವಿಲೆವಾರಿ ಮಾಡುವಲ್ಲಿ ಮ.ಮ.ಹಳ್ಳಿ ಪ.ಪಂ ವಿಫಲ: ಕರವೇ ಆರೋಪ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜ17: ಮರಿಯಮ್ಮನಹಳ್ಳಿ ಪಟ್ಟಣವನ್ನು ಕಸಮುಕ್ತ ಮಾಡುವ ನಿಟ್ಟಿನಲ್ಲಿ ಪ. ಪಂ. ಆಡಳಿತ ವರ್ಗ ನಾನಾ ಕಸರತ್ತು ಮಾಡುತ್ತಿದೆಯಾದರೂ ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿ ವಿಫಲವಾಗುತ್ತಿದೆ.
ಪಟ್ಟಣಕ್ಕೆ ಸಮೀಪದ ಹೊರವಲಯದ ರಾಜ್ಯ ಹೆದ್ದಾರಿ ಬದಿಯಲ್ಲಿ (ನಂದಿಬಂಡಿ ರಸ್ತೆ) ಸಂಗ್ರಹಿಸಿದ ಕಸವನ್ನು ಹಾಕಲಾಗುತ್ತಿದ್ದು, ಕಸದ ರಾಶಿಯಿಂದಾಗಿ ಆ ಸ್ಥಳವು ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣವಾಗಿ ಮಾರ್ಪಡುತ್ತಿದೆ ಎಂದು ಸ್ಥಳೀಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಿಯಮ್ಮನಹಳ್ಳಿ ಪ.ಪಂ.ನ ಎಲ್ಲಾ ವಾರ್ಡ್‌ಗಳಿಂದ ರಾಶಿ-ರಾಶಿ ಕಸವನ್ನು ಸಂಗ್ರಹಿಸಿ ತಂದು ಇಲ್ಲಿ ಸುರಿಯಲಾಗುತ್ತಿದೆ. ಪ್ರಸ್ತುತ ಇಲ್ಲಿ ಸಂಗ್ರಹವಾಗಿರುವ ಕಸ ವಿಲೇವಾರಿಯಾಗದೆ ಹಾಗೂ ಸೂಕ್ತ ನಿರ್ವಹಣೆ ಇಲ್ಲದಿರುವುದರಿಂದ ರಸ್ತೆಯ ತುಂಬೆಲ್ಲ ಹರಡುತ್ತಿದೆ. ಅಲ್ಲದೇ ಈ ನಡುವೆ ಕೆಟ್ಟ ವಾಸನೆಯೂ ಸೃಷ್ಟಿಯಾಗಿದೆ. ಜೊತೆಗೆ ಸೊಳ್ಳೆ-ನೊಣಗಳ ಹಾವಳಿ ಪ್ರಾರಂಭವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ನಾಗರಿಕರನ್ನು ಕಾಡುತ್ತಿದೆ.
 “ಪ್ರಾಣಿಗಳ ಪ್ರಾಣಕ್ಕೆ ಕಂಟಕ”
ಕಸದ ಜತೆಗೆ ಪ್ಲ್ಯಾಸ್ಟಿಕ್‌ ಮತ್ತು ಆಹಾರ ತ್ಯಾಜ್ಯಗಳನ್ನು ಸುತ್ತಮುತ್ತಲಿನ ಬೀದಿ ನಾಯಿಗಳು, ಹಂದಿ ಹಾಗೂ ಹಸುಗಳು ಸೇವಿಸಲು ಮುಂದಾಗಿದ್ದು, ಪ್ಲ್ಯಾಸ್ಟಿಕ್‌ ಸೇವಿಸುವುದರಿಂದ ಪ್ರಾಣಿಗಳ ಜೀವಕ್ಕೆ ಕಂಟಕಪ್ರಾಯವಾಗಿದೆ. ಅಲ್ಲದೆ ಕೆಲ ಕಸದ ತ್ಯಾಜ್ಯ  ಕೊಳೆಯುವುದರಿಂದ ಸುತ್ತಮುತ್ತಲೂ ದುರ್ನಾಥ ಬೀರುತ್ತಿದೆ. ಕೂಡಲೇ ಪ.ಪಂ. ಸಿಬ್ಬಂದಿಗಳು ಸೂಕ್ತ ಸ್ಥಳದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಿ ವಿಲೇವಾರಿಗೆ ಮುಂದಾಗಬೇಕೆಂದು ಕ.ರ.ವೇ.ಹೊಸಪೇಟೆ ತಾಲೂಕು ಅಧ್ಯಕ್ಷ ಈ.ರಮೇಶ್ ಬ್ಯಾಲಕುಂದಿ, ನಗರ ಘಟಕದ ಅಧ್ಯಕ್ಷ ಬಿ. ರಘುರಾಮ ನಾಯಕ, ಪ್ರಧಾನ ಕಾರ್ಯದರ್ಶಿ ಆದಿಮನಿ ಮೆಹೆಬೂಬ್ ಬಾಷ, ಸಂಘಟನಾ ಕಾರ್ಯದರ್ಶಿ ಯು.ಹುಲುಗಪ್ಪ ಒತ್ತಾಯಿಸಿದರು.