ಕಸ, ಚರಂಡಿಯ ಹೂಳು – ದುರ್ವಾಸನೆ ಮಧ್ಯೆ ನಗರದ ಜನರ ದಯಾನೀಯ ಜೀವನ

ನಗರಸಭೆ, ಸಂಸದರು, ಶಾಸಕರು, ಜಿಲ್ಲಾಡಳಿತ ಇದ್ದರೂ ನಾಗರೀಕರಿಗೆ ಇದೆಂಥ ಪಾಡು
ರಾಯಚೂರು.ಮೇ.೨೭- ಜಿಲ್ಲಾ ಕೇಂದ್ರ ನಗರದ ಸ್ವಚ್ಛತೆ ನಿರ್ವಹಣೆ ಯಾರ ಹೊಣೆ?. ಸಂಸದರು, ಶಾಸಕರು, ನಗರಸಭೆ, ಜಿಲ್ಲಾಡಳಿತ ಇಷ್ಟೆಲ್ಲಾ ಇದ್ದರೂ, ನಗರದ ತ್ಯಾಜ್ಯ ಚರಂಡಿಯಲ್ಲಿರುತ್ತದೆ, ಇಲ್ಲ ರಸ್ತೆ ಅಕ್ಕಪಕ್ಕದಲ್ಲಿ ಬಿದ್ದಿರುತ್ತದೆ ಎನ್ನುವ ದುಸ್ಥಿತಿಯಿಂದ ಇಲ್ಲಿಯ ಜನ ಸಂಪೂರ್ಣ ಬೇಸತ್ತು ಹೋಗಿದ್ದಾರೆ.
ಪ್ರತಿನಿತ್ಯ ಸ್ಯಾನಿಟೈಜ್‌ಗೆ ಸಂಬಂಧಿಸಿ, ಅಷ್ಟೇ ಮತ್ತಿತರ ಬಡಾವಣೆಗಳಲ್ಲಿ ಏನೆಲ್ಲಾ ನಾಟಕ ನಡೆದರೂ, ರಸ್ತೆಯ ಚರಂಡಿ ಮತ್ತು ಅಕ್ಕಪಕ್ಕದಲ್ಲಿ ಬಿದ್ದ ರಾಶಿ ರಾಶಿ ಕಸ ಮತ್ತು ಚರಂಡಿ ಹೂಳು ಮಾತ್ರ ತೆಗೆಯುವವರೆ ಗತಿಯಿಲ್ಲ?. ನಗರಸಭೆ ಇದ್ದು ಇಲ್ಲದಂತಾಗಿದೆ. ಶಾಸಕರು, ಸಂಸದರು ಮತ್ತು ಜಿಲ್ಲಾಡಳಿತ ಇದನ್ನು ಕಂಡು ಕಾಣದ ಅಸಹಾಯಕತೆಯಲ್ಲಿದ್ದರೇ, ಜನ ಮಾತ್ರ ಮಲೇರಿಯಾ, ಕೊರೊನಾ, ಡೆಂಗ್ಯೂ ಇನ್ನೂ ಇತ್ಯಾದಿ ಹತ್ತಾರು ರೋಗಗಳಿಗೆ ತುತ್ತಾಗುತ್ತಾ, ಆಸ್ಪತ್ರೆ, ಮನೆ ತಿರುಗುವುದರಲ್ಲಿ ದಿವಾಳಿಯಾಗುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಲಿದೆ.
ಅರ್ಧವರ್ಷ, ವರ್ಷಕ್ಕೊಮ್ಮೆ ಚರಂಡಿಗಳ ಹೂಳು ತೆಗೆಯುವ ನಗರಸಭೆ ಈ ಹೂಳನ್ನು ತಕ್ಷಣವೇ ಅಲ್ಲಿಂದ ಘನತ್ಯಾಜ್ಯ ವಿಲೇವಾರಿ ಪ್ರದೇಶಕ್ಕೆ ಸ್ಥಳಾಂತರಿಸದೇ, ಜನವಸತಿ ಪ್ರದೇಶಗಳಲ್ಲಿಯೇ ರಾಶಿ ರಾಶಿ ಹಾಕಿ, ಒಣಗಿಸುವಂತಹ ವಿಶಿಷ್ಟ ತಂತ್ರಜ್ಞಾನ ನಗರದಲ್ಲಿ ಬಿಟ್ಟರೇ, ಬೇರೆ ಎಲ್ಲೂ ಸಹ ಪ್ರಯೋಗದಲ್ಲಿರಲಿಕ್ಕಿಲ್ಲ. ಸಾವಿರಾರು ಜನ ಓಡಾಡುವ ರಸ್ತೆಗಳಲ್ಲಿ ರಾಜ ಕಾಲುವೆಗಳ ಹೂಳು ರಾಶಿ ಹಾಕಿದರೇ, ಅಲ್ಲಿಯ ಜನ ದುರ್ನಾತದಲ್ಲಿ ಓಡಾಡುವುದಾದರೂ ಹೇಗೆ?. ರಾಜ ಕಾಲುವೆ ಅಕ್ಕಪಕ್ಕದಲ್ಲಿರುವ ಜನ ಅಲ್ಲಿ ವಾಸ ಮಾಡುವುದಾದರೂ ಹೇಗೆ?.
ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾಡಳಿತ ಮತ್ತು ಶಾಸಕ, ಸಂಸದರು ಇಲ್ಲಿ ವಾಸವಾಗಿರುವವರನ್ನೂ ಮನುಷ್ಯರೆಂದು ಭಾವಿಸಿದ್ದಾರೆಯೋ ಅಥವಾ ಎಲ್ಲಾವನ್ನು ಸಹಿಸಿಕೊಳ್ಳುವ ಜೀವಿಗಳೆಂದು ಭಾವಿಸಿದ್ದಾರೆಯೇ?. ಅತ್ಯಂತ ಕೆಟ್ಟ ದುರ್ವಾಸನೆ ಮತ್ತು ಆರೋಗ್ಯಕ್ಕೆ ಅತ್ಯಂತ ಮಾರಕವಾದ ಇಂತಹ ರಾಶಿಯ ಮಧ್ಯೆ ಜನರಿಂದ ಆಯ್ಕೆಗೊಂಡ ಮತ್ತು ಜನರ ಸೇವೆ ಹೊತ್ತ ವ್ಯಕ್ತಿಗಳು ವಾಸ ಮಾಡಿದರೇ, ಅಲ್ಲಿಯ ಕಷ್ಟ ಅರಿಯಲು ಸಾಧ್ಯವಾಗುತ್ತದೆ. ಮಳೆಗಾಲದ ಹಿನ್ನೆಲೆಯಲ್ಲಿ ವರ್ಷಗಳಿಂದ ಹೂಳು ತುಂಬಿದ ರಾಜ ಕಾಲುವೆಗಳನ್ನು ಅಲ್ಲಲ್ಲಿ ಹೂಳು ಎತ್ತಲಾಗಿದೆ.
ಆದರೆ, ಈ ಎಲ್ಲಾ ಹೂಳನ್ನು ಚರಂಡಿಗಳ ಅಕ್ಕಪಕ್ಕದಲ್ಲಿಯೇ ಸಾವಿರಾರು ಜನ ವಾಸವಾಗಿರುವ ಸ್ಥಳಗಳಲ್ಲಿಯೇ ಹಾಕಲಾಗಿದೆ. ನಗರಸಭೆಯಲ್ಲಿ ಪರಿಸರ ವಿಭಾಗವೊಂದು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿದೆ. ಇಂತಹ ದುರ್ನಾತದ ಪರಿಸ್ಥಿತಿಯಲ್ಲಿ ಜನ ವಾಸಿಸುವುದಕ್ಕಾಗಿಯೇ ಈ ಪರಿಸರ ವಿಭಾಗ ಕಾರ್ಯ ನಿರ್ವಹಿಸುತ್ತಿದೆಯೇ?. ನಾಗರೀಕ ಪ್ರಜ್ಞೆಯುಳ್ಳ ಯಾವ ವ್ಯಕ್ತಿಯೂ ಸಹ ಜನರನ್ನು ಇಂತಹ ಅವ್ಯವಸ್ಥೆಯಲ್ಲಿ ವಾಸಿಸಲು ಬಿಡುವುದಿಲ್ಲ. ಜನರು ಇರುವೆಡೆ ಸ್ವಚ್ಛತೆ ನಿರ್ವಹಿಸಬೇಕು ಎನ್ನುವ ಕನಿಷ್ಟ ಜ್ಞಾನ ಇಲ್ಲಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇಲ್ಲವಾದರೇ, ಜನರ ಆರೋಗ್ಯ ಜೀವನ ಸುರಕ್ಷಿತವಾಗಿರಲು ಸಾಧ್ಯವೇ?.
ಜನರು ನಗರಸಭೆಗೆ ಪ್ರತಿ ವರ್ಷ ತೆರಿಗೆ ತುಂಬುತ್ತಿರುವುದು ಅಲ್ಲಿಯ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ಬೋಗಸ್ ಬಿಲ್‌ಗಳಿಂದ ತಮ್ಮ ತಮ್ಮ ಆಸ್ತಿಗಳನ್ನು ದುಪ್ಟಟ್ಟು ಮಾಡಿಕೊಳ್ಳುವುದಲ್ಲ. ಎರಡುವರೆ ಲಕ್ಷ ಜನ ವಾಸಿಸುವ ಈ ನಗರಕ್ಕೆ ಒಂದಷ್ಟು ಮೂಲಭೂತ ಸೌಕರ್ಯ ಒದಗಿಸಲು. ಆದರೆ, ನಗರಸಭೆ ಎಲ್ಲಿಯೂ ಸಹ ಜನರ ಮೂಲಭೂತ ಸೌಕರ್ಯ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವುದು ನಗರದಲ್ಲಿ ಸಂಚರಿಸಿದರೇ ಸ್ಪಷ್ಟಗೊಳ್ಳುತ್ತದೆ. ಬಡಾವಣೆಗಳಲ್ಲಿ ಕಸದ ರಾಶಿ, ರಾಜ ಕಾಲುವೆ ಮತ್ತು ಚರಂಡಿಗಳ ಸುತ್ತಮುತ್ತ ದುರ್ವಾಸನೆಯ ಹೂಳಿನ ರಾಶಿಯ ಮಧ್ಯೆ ಜನ ಸಾಯುವಂತಹ ವಾತಾವರಣವನ್ನು ಇಲ್ಲಿಯ ನಗರಸಭೆ ಮತ್ತು ಜನಪ್ರತಿನಿಧಿಗಳು ನಿರ್ಮಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಎಲ್ಲಾ ನಗರಗಳು ಅಭಿವೃದ್ಧಿಯತ್ತ ಸಾಗಿದರೇ, ರಾಯಚೂರು ನಗರ ಮಾತ್ರ ವರ್ಷದಿಂದ ವರ್ಷಕ್ಕೆ ಅವ್ಯವಸ್ಥೆಯ ಆಗರದತ್ತ ಸಾಗಿದೆ. ಪ್ರತಿ ವರ್ಷ ಕೆಲ ನಗರಸಭೆ ಸದಸ್ಯರು ಹೊರತು ಪಡಿಸಿದರೇ, ಬಹುತೇಕರು ತಮ್ಮ ಆಸ್ತಿ, ಅಂತಸ್ತು ಹೆಚ್ಚಿಸಿಕೊಳ್ಳುತ್ತಿದ್ದರೇ, ಜನರ ಜೀವನ ಮಟ್ಟ ಮಾತ್ರ ಅದಃಪತನಕ್ಕೆ ಕುಸಿಯುತ್ತಿದೆ. ಇದೆಲ್ಲವನ್ನು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು, ಆಡಳಿತರೂಢ ಪಕ್ಷದ ಜನಪ್ರತಿನಿಧಿಗಳೊಂದಿಗೆ ಆಂತರಿಕ ವ್ಯವಹಾರದ ಮುಲಾಜಿಗೆ ಬಾಯಿ ಮುಚ್ಚಿ ಕುಳಿತಿದ್ದಾರೆ.
ವೈಯಕ್ತಿಕವಾಗಿ ತಮಗೆ ಸಮಸ್ಯೆಯಾದಾಗ ಎಚ್ಚೆತ್ತುಕೊಂಡು ಬಳೆ, ಸೀರೆ, ಹೂವು ಮತ್ತಿತರ ಎಚ್ಚರಿಕೆ, ಬೆದರಿಕೆ ನೀಡಿ, ನಂತರ ಮತ್ತೇ ವರ್ಷಗಳ ಕಾಲ ಮಲಗುವ ವಿರೋಧ ಪಕ್ಷಗಳಿಂದಾಗಿ ನಗರದಲ್ಲಿ ಅವ್ಯವಸ್ಥೆ ತಾರಕಕ್ಕೇರುವಂತೆ ಮಾಡಿದೆ. ನಗರವನ್ನು ನೋಡಿದಾಗ ಇದೊಂದು ನಗರವೇ ಎಂದು ಪ್ರಶ್ನಿಸಿಕೊಳ್ಳುವಂತಹ ಪರಿಸ್ಥಿತಿ ಇಲ್ಲಿದೆ. ಕೆಲ ನಗರಸಭೆ ಸದಸ್ಯರಿಗೆ ಇದು ನನ್ನ ವಾರ್ಡ್, ಇಲ್ಲಿಯ ಸ್ವಚ್ಛತೆ ನನ್ನ ಕರ್ತವ್ಯ ಎನ್ನುವ ಅರಿವೇ ಇಲ್ಲದ ಪರಿಸ್ಥಿತಿಯಿಂದ ಜನ ಜೀವನ ನರಕವಾಗಿ ಹಂದಿ, ನಾಯಿ, ಜಾನುವಾರುಗಳ ಮಧ್ಯೆ ನಾವು ಒಬ್ಬರೆಂದು ಬದುಕುವಂತಹ ನಾಚಿಕೆಗೇಡಿನ ಪರಿಸ್ಥಿತಿ ಅನಿವಾರ್ಯವೇ?.