ಕಸ್ತೂರಿ ರಂಗನ್ ವರದಿ : ಅರಣ್ಯ ನಿವಾಸಿಗಳ ಜೀವನಕ್ಕೆ ತೊಂದರೆಯಾಗದಂತೆ ಜಾರಿ

ಪುತ್ತೂರು, ಜ.೧೦- ಅರಣ್ಯ ಪ್ರದೇಶದ ರಕ್ಷಣೆಯ ಜೊತೆಗೆ ಕಾನೂನಿಗೆ ತೊಡಕಗಾಗದಂತೆ ಅಲ್ಲಿನ ಕೃಷಿಕರು ಹಾಗೂ ಮೂಲ ನಿವಾಸಿಗಳ ಜನಜೀವನಕ್ಕೂ ವ್ಯತ್ಯಾಸ ಆಗದಂತೆ ಕಸ್ತೂರಿ ರಂಗನ್ ವರದಿ ಜಾರಿಯಾಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ದರ್ಬೆ ಹೋಟೇಲ್ ಅಶ್ಚಿನಿಯ ಹಾಲ್‌ನಲ್ಲಿ ಜ.೯ರಂದು ನಡೆದ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ವಿಭಾಗದ ೨೦೨೦-೨೧ನೇ ಸಾಲಿನ ಮಹಾಸಭೆಯನ್ನು ೨೦೨೧ರ ದಿನಚರಿ ಬಿಡುಗಡೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದ.ಕ ಜಿಲ್ಲೆ, ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶ ಹಾಗೂ ಮಳೆನಾಡು ಪ್ರದೇಶಗಳು ವನ್ಯಜೀವಿ, ಅರಣ್ಯ ಸಂಪತ್ತನ್ನು ಹೊಂದಿರುವ ಪ್ರದೇಶ. ಇದನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕಸ್ತೂರಿ ರಂಗನ್ ಸಮಿತಿಯ ಮೂಲಕ ವರದಿಯನ್ನು ಪಡೆದುಕೊಂಡು ರಾಜ್ಯ ಸರಕಾರದಿಂದ ಒಪ್ಪಿಗೆಯನ್ನು ಪಡೆದುಕೊಳ್ಳಲಿದೆ. ಈ ವರದಿ ಜಾರಿಯಿಂದಾಗುವ ಸಮಸ್ಯೆಗಳ ಕುರಿತು ಚರ್ಚಿಸಿ ಈ ಭಾಗದ ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದು ಎಲ್ಲರಿಗೂ ರಕ್ಷಣೆ ನೀಡಿ ಅಲ್ಲಿರುವ ಆದಿವಾಸಿಗಳ ಮೂಲ ಕಸುಬು, ಕೃಷಿಕರ ಜನಜೀನವಕ್ಕೆ ವ್ಯತ್ಯಾಸ ಆಗದಂತೆ ಜಾರಿಮಾಡುವಂತೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಈ ವರದಿ ಜಾರಿಯನ್ನು ಸರ್ಕಾರ ಸದ್ಯಕ್ಕೆ ಬದಿಗಿರಿಸಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಸೂಚನೆ ಬರಲಿದೆ ಎಂದು ಹೇಳಿದರು.
ಎಸ್‌ಪಿ ಕಚೇರಿ ಪುತ್ತೂರಿನಲ್ಲಿ ತೆರೆಯಲು ಗೃಹ ಸಚಿವರಿಂದ ಸ್ಪಂಧನೆ ದೊರೆತಿದೆ. ಇದಕ್ಕೆ ೨೦ ಎಕರೆ ಜಾಗ ಮಂಜೂರುಗೊಂಡಿದ್ದು ಈ ವರ್ಷದಲ್ಲಿ ಬಜೆಟ್‌ನಲ್ಲಿ ಅನುಮೋದನೆ ದೊರೆಯಲಿದೆ. ಅರಣ್ಯ ಪ್ರದೇಶಗಳು ಅಧಿಕವಾಗಿದ್ದು ಪುತ್ತೂರಿನಲ್ಲಿಯೇ ಮುಂದಿನ ಬಜೆಟ್‌ಗೆ ಡಿಎಫ್‌ಓ ಕಚೇರಿ ಬರುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಪುತ್ತೂರು ಗ್ರಾಮಾಂತರ ಜಿಲ್ಲೆಯಾಗಿ ಘೋಷಣೆಯಾಗಲಿದೆ ಎಂದು ಅವರು ಹೇಳಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ತಾಂತ್ರಿಕ ಸಹಾಯಕ ಶ್ರೀಧರ್ ನಾಯಕ್ ಮಾತನಾಡಿ, ಕಾನೂನಿನ ಚೌಕಟ್ಟಿನ ಒಳಗೆ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಲಿದೆ. ಕೆಲವೊಂದು ಸಂದರ್ಭದಲ್ಲಿ ಸಮಯಾವಕಾಶದ ಆವಶ್ಯಕತೆ ಇದೆ. ಅಧಿಕಾರಿ ಹಾಗೂ ಸಿಬಂದಿಗಳು ಸಾರ್ವಜನಿಕದೊಂದಿಗೆ ಸೌಜನ್ಯ ಯುತವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲಾಖೆಯ ಗೌರವ ಉಳಿಸಬೇಕು ಎಂದರು.
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ರಾಧಾಕೃಷ್ಣ ಆಳ್ವ, ಅರಣ್ಯಾಧಿಕಾರಿ ವಿ.ಟಿ ಕಾರ್ಯಪ್ಪ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂತೋಷ್ ರೈ ವಹಿಸಿದ್ದರು.
ಸನ್ಮಾನ:
ನಿವೃತ್ತ ಉಪ ವಲಯಾರಣ್ಯಾಧಿಕಾರಿ ವೆಂಕಪ್ಪ ನಾಯ್ಕ, ಮುಖ್ಯ ಮಂತ್ರಿ ಪದಕ ವಿಜೇತ ಮೋಹನ್ ಜಿ, ಸರ್ಕಾರಿನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಉಪ ವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಶ್ರೀವಿದ್ಯಾ ಮಂಗಳೂರು ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಿ.ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಕುಮಾರಸ್ವಾಮಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.