‘ಕಸ್ತೂರಿ ಮಹಲ್’ ನಿಂದ ರಚಿತಾ ರಾಮ್ ಔಟ್?

ಬೆಂಗಳೂರು, ಸೆ 21- ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ‘ಕಸ್ತೂರಿ ಮಹಲ್’ ತಂಡದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊರನಡೆದಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ.

ಅತ್ಯಂತ ಪ್ರೀತಿಯಿಂದಲೇ ಸಿನಿಮಾ ಒಪ್ಪಿಕೊಂಡಿದ್ದಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಚಿತಾ ದಿಢೀರನೆ ಸಿನಿಮಾದಿಂದ ಹೊರನಡೆದಿರುವುದು ಅಚ್ಚರಿ ಮೂಡಿಸಿದೆ. ರಚಿತಾ ಈ ಸಿನಿಮಾಗೆ ಸಹಿ ಹಾಕುವಾಗ ಚಿತ್ರಕ್ಕೆ ‘ಕಸ್ತೂರಿ ನಿವಾಸ’ ಎಂದು ಟೈಟಲ್ ಇಡಲಾಗಿತ್ತು. ಆದರೆ ಈ ಟೈಟಲ್ ಇಟ್ಟಾಗಿನಿಂದ ಸಿನಿಮಾ ವಿವಾದದ ಕೇಂದ್ರಬಿಂದುವಾಗಿತ್ತು.

ಡಾ.ರಾಜ್ ಕುಮಾರ್ ನಟನೆಯ ಸುಪ್ರಸಿದ್ಧ ಸಿನಿಮಾದ ಹೆಸರನ್ನು ನಿರ್ದೇಶಕ ದಿನೇಶ್ ಬಾಬು ತನ್ನ ಬಳಸಿಕೊಂಡಿದ್ದರ ಬಗ್ಗೆ ರಾಜ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಟೈಟಲ್ ಬದಲಾಯಿಸುವಂತೆ ಅಭಿಮಾನಿಗಳು ನಿರ್ದೇಶಕರನ್ನು ಒತ್ತಾಯ ಮಾಡಿದ್ದರು. ಆದರೆ ತಮಗೂ ಇದಕ್ಕೂ ಸಂಬಂಧವಿಲ್ಲ. ನಿರ್ಮಾಪಕರೇ ಟೈಟಲ್ ಇಟ್ಟಿದ್ದು. ಅದನ್ನು ಬದಲಿಸುವಂತೆ ಸ್ವತಃ ಸೂಚಿಸಿದ್ದೆ ಎಂದಿದ್ದರು.

ಕೊನೆಗೂ ನಿರ್ಮಾಪಕರು ಹಿರಿಯ ನಿರ್ದೇಶಕ ಭಗವಾನ್ ಅವರೊಡನೆ ಚರ್ಚಿಸಿ ‘ಕಸ್ತೂರಿ ಮಹಲ್’ ಎಂದು ಬದಲಿಸಿದ್ದರು. ಇನ್ನೇನು ಚಿತ್ರೀಕರಣ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ರಚಿತಾ ಸಿನಿಮಾದಿಂದ ಹೊರನಡೆದಿದ್ದಾರೆ

ರಚಿತಾ ಸಿನಿಮಾದಿಂದ ಹೊರ ನಡೆಯಲು ಕಾರಣ ಡೇಟ್ ಸಮಸ್ಯೆ ಎಂದು ಹೇಳಲಾಗುತ್ತಿದೆ. ರಚಿತಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಹಾಗಾಗಿ ಡೇಟ್ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಿನಿಮಾದಿಂದಲೇ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೆಲವರು ಡೇಟ್ ಸಮಸ್ಯೆಯಾಗುತ್ತೆ ಎಂದು ಈ ಮೊದಲು ರಚಿತಾ ಅವರಿಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸುತ್ತಿದ್ದು, ಸ್ವತಃ ರಚಿತಾ ರಾಮ್ ಅವರೇ ಇದಕ್ಕೆ ಉತ್ತರಿಸಬೇಕಿದೆ