ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಂಚನೆ ಖತರ್ನಾಕ್ ದಂಪತಿ ಸೆರೆ

ಬೆಂಗಳೂರು,ನ.೨೪-ಕಸ್ಟಮ್ಸ್ ಅಧಿಕಾರಿಗಳೆಂದು ನಂಬಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಎಐಎಲ್)ದಲ್ಲಿ ಕೆಲಸ ಕೊಡಿಸುವುದಲ್ಲದೇ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಅಸ್ಸಾಂ ಮೂಲದ ಖತರ್ನಾಕ್ ದಂಪತಿಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದರ್ಬಿನ್ ದಾಸ್ ಅಲಿಯಾಸ್ ಮೋಹನ್‌ದಾಸ್ ಹಾಗೂ ಧನುಷ್ಯ ಅಲಿಯಾಸ್ ಬಂಧಿತ ದಂಪತಿಯಾಗಿದ್ದು, ಬಂಧಿತರಿಂದ ೩೪ ಲಕ್ಷದ ೫೦ ಸಾವಿರ ನಗದು, ೧೦೬.೯೬೫ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಇಂದಿರಾನಗರದಲ್ಲಿ ನೈಲ್‌ಬಾಕ್ಸ್ ಅಕಾಡೆಮಿ ನಡೆಸುತ್ತಿರುವ ಸ್ನೇಹ ಕೆ ಭಗವತ್ ಎಂಬುವರಿಗೆ ಸದರಿ ಅಕಾಡೆಮಿಯಲ್ಲಿ ಟ್ರೈನಿಂಗ್‌ಗೆ ಸೇರಿದ್ದ ಆರೋಪಿ ಧನುಷ್ಯ ಅಲಿಯಾಸ್ ರಾಚೆಲ್ ತನ್ನ ಪತಿ ದಾರ್ಬಿನ್ ದಾಸ್ ಅಲಿಯಾಸ್ ಮೋಹನ್‌ದಾಸ್ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಜಪ್ತಿ ಮಾಡಿರುವ ಚಿನ್ನಾಭರಣಗಳು ಅವರಿಗೆ ಕಡಿಮೆ ಬೆಲೆಗೆ ಸಿಗುವುದಾಗಿ ನಿಮಗೂ ಸಹ ಚಿನ್ನದ
ವಡವೆಗಳನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ನಂಬಿಸಿ ಬೇರೆ ಬೇರೆ ದಿನಗಳಂದುಸ್ನೇಹ ಕೆ ಭಗವತ್ ರವರಿಂದ ಒಟ್ಟಾರೆಯಾಗಿ ೬೮ ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಹಣ ಪಡೆದು ಕೊಂಡು ನಂತರ ಯಾವುದೇ ಚಿನ್ನಾಭರಣಗಳನ್ನು ಕೊಡಿಸದೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಳು.
ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿತ್ತು.ಅಲ್ಲದೆ ದೇವನಹಳ್ಳಿಯ ಯೂರೋ ಕಿಡ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಶ್ವೇತಾ ಎಂಬುವರಿಗೆ ದಾರ್ಬಿನ್ ದಾಸ್ ಅಲಿಯಾಸ್ ಮೋಹನ್‌ದಾಸ್ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುವುದಾಗಿ ವಿಮಾನನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಗಿ ಅವರಿಂದ ೯೬,೭೫೦/- ರೂ ಗಳನ್ನು ಪಡೆದು ನಂತರ ಕೆಲಸ ಕೊಡಿಸದೆ ತಲೆಮರೆಸಿಕೊಂಡಿದ್ದು, ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿರುತ್ತದೆ.
ಅಲ್ಲದೆ ಅಕಾಡೆಮಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಂದಲೂ, ಆರೋಪಿತರ ಮಗಳು ಓದುತ್ತಿರುವ ಶಾಲೆಯ ಶಿಕ್ಷಕರು, ಮಕ್ಕಳ ಪೋಷಕರಿಂದಲೂ, ಆರೋಪಿತರು ವಾಸವಿದ್ದ ಬ್ರಿಗೇಡ್ ಆರ್ಚಡ್ ಅಪಾರ್ಟ್‌ಮೆಂಟ್‌ನ ವಾಸಿಗಳಿಂದಲೂ ವಿಮಾನನಿಲ್ದಾಣದಲ್ಲಿ ಕೆಲಸ
ಕೊಡಿಸುವುದಾಗಿ, ಕಡಿಮೆ ಬೆಲೆಗೆ ಐ-ಫೋನ್‌ಗಳನ್ನು, ಲ್ಯಾಪ್‌ಟಾಪ್, ಗ್ಯಾಜೆಟ್ಸ್‌ಗಳನ್ನು ಕೊಡಿಸುತ್ತೇನೆಂದು ಬೇರೆ ಬೇರೆ ದಿನಾಂಕಗಳಂದು ನಗದು ರೂಪದಲ್ಲಿ, ಆನ್‌ಲೈನ್ ಮೂಲಕ ಲಕ್ಷಾಂತರ ರೂ ಹಣವನ್ನು ಪಡೆದುಕೊಂಡು ನಂತರ ಪತಿ ಪತ್ನಿ ಇಬ್ಬರೂ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡು ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳಾದ ದಾರ್ಬಿನ್ ದಾಸ್ ಹಾಗೂ ಆತನ ರಾಚೆಲ್ ನನ್ನು ಉಡುಪಿಯಲ್ಲಿ ವಶಕ್ಕೆ ತೆಗೆದುಕೊಂಡು ಅವರುಗಳು ಹೊಸದಾಗಿ ಬಾಡಿಗೆಗೆ ಪಡೆದಿದ್ದ ಮಂಗಳೂರಿನ ಮೇರಿಹಿಲ್ಸ್ ಏರ್‌ಪೋರ್ಟ್
ರಸ್ತೆಯಲ್ಲಿರುವ ವಾಸದ ಫ್ಲಾಟ್‌ನಿಂದ ಸಾರ್ವಜನಿಕರಿಂದ ವಂಚಿಸಿ ಪಡೆದಿದ್ದ ೩೪ ಲಕ್ಷದ ೫೦ ಸಾವಿರ ನಗದು ೧೦೬.೯೬೫ ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.