ಕಸ್ಟಮ್ಸ್​ ಅಧಿಕಾರಿಗಳ ಕಾರ್ಯಾಚರಣೆ 1.01 ಕೋಟಿ ಮೌಲ್ಯದ ಚಿನ್ನ ವಶ

ಬೆಂಗಳೂರು,ನ.8-ಕಸ್ಟಮ್ಸ್​ ವಿಭಾಗದ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ, ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ತಪಾಸಣೆ ನಡೆಸುವ ವೇಳೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪಿಗಳು ಬೆಂಗಳೂರು ಕಸ್ಟಮ್ಸ್​ ವಿಭಾಗದ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಈ ವೇಳೆ ಒಟ್ಟು ಮೂರು ಪ್ರಕಣಗಳು ಪತ್ತೆಯಾಗಿದ್ದು, ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
ಪೇಸ್ಟ್​ ರೂಪದ 86,24,954 ರೂಪಾಯಿ ಮೌಲ್ಯದ ಚಿನ್ನ ಹಾಗೂ 15,57,312 ರೂಪಾಯಿ ಮೌಲ್ಯದ ಗಟ್ಟಿ ಚಿನ್ನ ಜಪ್ತಿ ಮಾಡಲಾಗಿದ್ದು, ಒಟ್ಟು 1,01,82,266 ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ