
ಸಂಜೆವಾಣಿ ವಾರ್ತೆ
ಗಂಗಾವತಿ, ಫೆ.25: ಮಾರ್ಚ್ 6 ಮತ್ತು 7ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಗಂಗಾವತಿ ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಲಾಖೆ ವಾರು ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸುವುದು ಮತ್ತು ಅಧಿಕಾರಿಗಳ ಪಾಲ್ಗೊಂಡು ಸಹಕಾರ ನೀಡುವುದು ಅಗತ್ಯವಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಗಂಗಾವತಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಈಗಾಗಲೆ ಇಲಾಖಾವಾರು ಜವಾಬ್ದಾರಿಗಳನ್ನು ನಿಗಧಿ ಪಡಿಸಾಗಿದೆ. ಯಾವ ಇಲಾಖೆಗೆ ಏನು ಜವಾಬ್ದಾರಿ ನೀಡಲಾಗಿದೆಯೋ ಅದನ್ನು ಆಯಾ ಅಧಿಕಾರಿಗಳ ಕಡ್ಡಾಯವಾಗಿ ಮಾಡಬೇಕು. ಸಮ್ಮೇಳನದ ಯಶಸ್ವಿಗೆ ತಮ್ಮ ಸಿಬ್ಬಂದಿಯೊಂದಿಗೆ ಸೇರಿ ಶ್ರಮಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಗಂಗಾವತಿಗೆ ಒಂದು ಪ್ರಮುಖ ಸ್ಥಾನವಿದೆ. ನಗರದಲ್ಲಿ 2011ರಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವವಾಗಿ ಯಶಸ್ವಿಯಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಸಮ್ಮೇಳನ ನಡೆದರೂ ಗಂಗಾವತಿಯಲ್ಲಿನ 78ನೇ ಸಮ್ಮೇಳನದ ನೆನಪು ಮೆಲಕು ಹಾಕುವ ಕೆಲಸ ಸಾಹಿತ್ಯಾಸಕ್ತರಿಂದ ನಡೆಯುತ್ತಿದೆ. ಹೀಗಾಗಿ ಗಂಗಾವತಿ ತಾಲ್ಲೂಕಿನಲ್ಲಿ ನಡೆಯುವ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಯಾವುದೇ ಸಮ್ಮೇಳನಗಳು ಅತ್ಯಂತ ಯಶಸ್ವಿಯಿಂದ ನಡೆಯಬೇಕು ಎಂದ ಶಾಸಕ, ನಿಮ್ಮ ನೇತೃತ್ವದಲ್ಲಿ ಅಧಿಕಾರಿಗಳ ಸಭೆಗಳನ್ನು ಆಯೋಜಿಸಿ ಸೂಕ್ತ ಸಲಹೆ ನೀಡಿ ಎಂದು ತಹಸೀಲ್ದಾರ್ ಮಂಜುನಾಥ ಹಿರೇಮಠ ಅವರಿಗೆ ಸೂಚನೆ ನೀಡಿದರು.
ತಹಸೀಲ್ದಾರ್ ಮಂಜುನಾಥ ಮಾತನಾಡಿ, ನಾನು ವಿದ್ಯಾರ್ಥಿಯಾಗಿದ್ದಾಗ ಗಂಗಾವತಿಯಲ್ಲಿ ನಡೆದ 78ನೇ ಅಖಿಲ ಭಾರತ ಸಮ್ಮೇಳನಕ್ಕೆ ಆಗಮಿಸಿದ್ದೆ. ಇಲ್ಲಿ ಸಮ್ಮೇಳನ ಆಯೋಜನೆಗೊಂಡಿರುವುದು ನೋಡಿಯೇ ಖುಷಿಯಾಗಿತ್ತು. ಇದೀಗ ಗಂಗಾವತಿಗೆ ತಹಸೀಲ್ದಾರ್ ಆಗಿ ನಿಯೋಜನೆಯಾಗಿದ್ದು ವೈಯಕ್ತಿಕ ಆಸಕ್ತಿ ವಹಿಸಿ ಕೆಲಸ ಮಾಡುತ್ತೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿಯ ಕಾರ್ಯದರ್ಶಿ ಗುರುಪ್ರಸಾದ, ಕಸಾಪದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಯ ತಾಲ್ಲೂಕು ಹಂತದ ಅಧಿಕಾರಿಗಾಳದ ಸೋಮಶೇಖರಗೌಡ, ಚೇತನಕುಮಾರ, ಸುದೇಶ ಕುಮಾರ, ಶರಣಪ್ಪ, ವಿರೂಪಾಕ್ಷಸ್ವಾಮಿ, ಶರಣಪ್ಪ ಚಕೋತಿ, ಸುರೇಶ ಉಪ್ಪಾರ, ಸಂತೋಷ್ ಪಟ್ಟದಕಲ್ ಸೇರಿದಂತೆ 20ಕ್ಕೂ ಹೆಚ್ಚು ಇಲಾಖೆಯ ಅಧಿಕಾರಿಗಳು ಹಾಗೂ ಕಸಾಪದ ಪದಾಧಿಕಾರಿಗಳಿದ್ದರು.