ಕಸಾಪ ಸಮಾಜಮುಖಿ ಕೆಲಸ ಮಾಡಲಿ:ಸಿಂಪಿ

ಕಲಬುರಗಿ,ಜು.12-ಜನರಿಂದ ಹಾಗೂ ಸಾಹಿತಿಗಳಿಂದ ಟೀಕೆಗೊಳಗಾಗುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೇವಲ ಪ್ರಚಾರಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದನ್ನು ಬಿಟ್ಟು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಿ ಎಂದು ಕಸಾಪ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ ಸಲಹೆ ನೀಡಿದ್ದಾರೆ.
ಸಾಹಿತಿಗಳನ್ನು, ಸಾಹಿತ್ಯಾಸಕ್ತರನ್ನು ಸೆಳೆಯುವಲ್ಲಿ ಕಸಾಪ ಅಧ್ಯಕ್ಷರು ವಿಫಲರಾಗಿದ್ದಾರೆ. ದಿನಕ್ಕೊಂದು ಕಾರ್ಯಕ್ರಮ ಮಾಡುತ್ತಾರೆ. ಅವರು ಮಾಡುವ ಕಾರ್ಯಕ್ರಮದಲ್ಲಿ ಬೆರಳೇಣಿಕೆಯಷ್ಟು ಜನರು ಪಾಲ್ಗೊಳ್ಳುತ್ತಿದ್ದಾರೆ. ಅತಿಥಿಗಳು ತಮ್ಮ ಮಾತು ತಾವೇ ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಜಿಲ್ಲೆಯ ಕಲೆ, ಸಾಹಿತ್ಯ ಬೆಳೆಸುವ ಕಾರ್ಯಕ್ರಮ ಆಯೋಜಿಸದೇ ಕಾಟಾಚಾರಕ್ಕೆ ಪ್ರಚಾರ ಪಡೆಯಲು ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಕಸಾಪಕ್ಕೆ ತನ್ನದೇಯಾದ ಘನತೆ ಇದೆ. ಆ ಘನತೆ ಉಳಿಸಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.
ನಗರಕ್ಕೆ ಆಗಮಿಸಿದ ಗಣ್ಯರನ್ನು ಕರೆದುಕೊಂಡು ಬಂದು ನಾಲ್ಕು ಜನರು ಸೇರಿ ಕಾರ್ಯಕ್ರಮ ಮಾಡಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದೇ ಅವರ ಕಾಯಕವಾಗಿದೆ. ಸಾಹಿತ್ಯ ಬೆಳೆಸುವುದರತ್ತ ಗಮನ ಹರಿಸುವ ಅಗತ್ಯವಿದೆ ಎಂದು ಕಸಾಪ ಕಾರ್ಯ ವೈಖರಿ ಬಗ್ಗೆ ಸಿಂಪಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.