ಕಸಾಪ ವತಿಯಿಂದ ವಿಶ್ವಮಾನವ ದಿನಾಚರಣೆ

ಬೀದರ:ಡಿ.31: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಿ.29ರಂದು ನಗರದ ಕಸಾಪ ಕಛೇರಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ನಿಮಿತ್ತ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬೀದರ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಮಾತನಾಡಿ, ಕುವೆಂಪು ಅವರು ವೈಚಾರಿಕ ನಿಲುವಿನಿಂದ ಜಗದ ಕವಿಯಾಗಿ ಹೊರಹೊಮ್ಮಿದರು. ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರಗಳನ್ನು ಮೆಟ್ಟಿ ಹೊರಬರಲು ಕರೆ ಕೊಟ್ಟಿದ್ದರೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ.ಬಸವರಾಜ ಬಲ್ಲೂರ ಅವರು, ಕುವೆಂಪು ಅವರು ಕನ್ನಡದ ಅಸ್ಮಿತೆಯನ್ನು ಉಳಿಸಲು ಪಂಪನ ನಂತರ ಆಧುನಿಕ ಕಾವ್ಯ ಕಾಲದಲ್ಲಿ ಕುವೆಂಪು ಅವರು ಮಹಾಕಾವ್ಯ ರಚಿಸಿ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಲೋಕದ ಪ್ರಥಮ ರಾಯಭಾರಿಯಾಗಿದ್ದರೆಂದು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಟಿ.ಎಂ ಮಚ್ಚೆ ಅವರು, ಬೆರಳ್ಗೆ ಕೊರಳ್ ಎನ್ನುವ ಅದ್ಭುತ ನಾಟಕ ರಚನೆಯ ಮೂಲಕ ಕುವೆಂಪು ತಾವು ಶ್ರೇಷ್ಠ ನಾಟಕಕಾರರೆಂದು ಸಾಬೀತುಪಡಿಸಿದ್ದಾರೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್.ಮನೋಹರ ವಹಿಸಿದ್ದರು. ವಿದ್ಯಾವತಿ ಬಲ್ಲೂರ, ಸಿದ್ಧಾರೂಢ ಭಾಲ್ಕೆ ಮತ್ತಿತರರು ಉಪಸ್ಥಿತರಿದ್ದರು. ಜಗನ್ನಾಥ ಕಪಲಾಪೂರೆ ಸ್ವಾಗತಿಸಿದರು. ಪಾರ್ವತಿ ಸೊನಾರೆ ವಂದಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು.