ಕಸಾಪ ಚುನಾವಣೆ-ಲಕ್ಷ್ಮಿ ಸಾಗರ್ ನಾಮಪತ್ರ ಸಲ್ಲಿಕೆ

ಕೋಲಾರ,ಏ.೮:ಗಡಿ ಜಿಲ್ಲೆಯಾದ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಶ್ರೀ ಕುವೆಂಪು ಕನ್ನಡ ಕಲಾ ಸಂಘದ ಅಧ್ಯಕ್ಷ ಲಕ್ಷ್ಮೀಸಾಗರ ಎಲ್.ಇ. ಕೃಷ್ಣೇಗೌಡರವರು ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ೨೦ ವರ್ಷಗಳಿಂದ ಕನ್ನಡಪರ, ರೈತಪರ, ಬಡವರ ಪರವಾಗಿ ಧ್ವನಿ ಎತ್ತಿ ಹೋರಾಟ ಮಾಡಿರುವ ಸುಮಾರು ದಾಖಲೆಗಳಿರುತ್ತವೆ. ಪ್ರತಿ ವರ್ಷವೂ ವಿಶ್ವಮಾನವರಾದ ಕುವೆಂಪು ರವರ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಸಾಧಕರಿಗೆ ಸನ್ಮಾನ, ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕಲಾವಿದರಿಗೆ ಅವಕಾಶ, ಕವಿಗಳ ಬಗ್ಗೆ ವಿಚಾರಗೋಷ್ಟಿ, ಅರಿವು ಮೂಡಿಸುವಂತಹ ಹಲವಾರು ಶಾಲಾ ಮಕ್ಕಳಿಗೆ ಕವಿಗಳ ಪರಿಚಯವನ್ನು ಮಾಡುವುದರ ಮುಖಾಂತರ ಕನ್ನಡ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುತ್ತೇನೆ ಎಂದರು. ನಾನು ಯಾವುದೇ ಫಲಾಪೇಕ್ಷೆಯಿಲ್ಲದೆ ಅನುದಾನಗಳಿಲ್ಲದೆ ತನು, ಮನ ಧನ ಹಾಗೂ ಶ್ರಮವನ್ನು ಇಡೀ ಜೀವನದುದ್ದಕ್ಕೂ ಕನ್ನಡಕ್ಕಾಗಿ ದುಡಿಯುವ ಉತ್ಸಾಹಕನಾಗಿರುವುದರಿಂದ, ಕನ್ನಡಕ್ಕಾಗಿ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ಜಿಲ್ಲೆಯ ಎಲ್ಲಾ ಪ್ರಬುದ್ಧ ಮತದಾರ ಬಂಧುಗಳಲ್ಲಿ ನನಗೆ ಮತ ನೀಡುವುದರ ಮುಖಾಂತರ ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ಪ್ರಾಮಾಣಿಕ ಕನ್ನಡ ಸೇವಕನಾಗಿ ಕೈಮುಗಿದು ಬೇಡುತ್ತೇನೆ ಎಂದರು.