ಕಸಾಪ ಚುನಾವಣೆ: ಬೆಂಬಲಿಸಲು ಮತದಾರರಿಗೆ ಶೇಖರಗೌಡ ಮನವಿ

ತುಮಕೂರು, ಸೆ. ೨೨- ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಮತದಾರರು ನನ್ನನ್ನು ಬೆಂಬಲಿಸಿ ಆಯ್ಕೆ ಮಾಡಿದರೆ ಪರಿಷತ್ತನ್ನು ಕನ್ನಡಿಗರ ಆಶಯಕ್ಕೆ ತಕ್ಕಂತೆ ಕಟ್ಟಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಶೇಖರಗೌಡ ವಿ. ಮಾಲಿ ಪಾಟೀಲ್ ತಿಳಿಸಿದರು.
ವೈ.ಎನ್. ಹೊಸಕೋಟೆ, ಪಾವಗಡ, ಕೊರಟಗೆರೆ ಮತ್ತಿತರ ಕಡೆ ಮತಯಾಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಳೆದ ೨೫ ವರ್ಷಗಳಿಂದಲೂ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ೨ ಅವಧಿಗೆ ಕೊಪ್ಪಳ ಜಿಲ್ಲಾಧ್ಯಕ್ಷನಾಗಿ ಗಂಗಾವತಿಯಲ್ಲಿ ನಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ್ದೇನೆ. ಇದರ ಜತೆಗೆ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುತ್ತೇನೆ. ನಾನು ಕೇಂದ್ರ ಸಮಿತಿಯ ಪದಾಧಿಕಾರಿಯಾಗಿದ್ದಾಗ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಕೆ.ಎನ್. ರಾಜಣ್ಣನವರ ಗಮನ ಸೆಳೆದು ಕನ್ನಡ ಭವನಗಳ ನಿರ್ಮಾಣಕ್ಕೆ ೨ ಕೋಟಿ ರೂ.ಗಳ ನೆರವಿಗೆ ಶ್ರಮಿಸಿದ್ದೇನೆ ಎಂದರು.
ಕಳೆದ ಎರಡು ವರ್ಷಗಳಿಂದ ೨ ಬಾರಿ ರಾಜ್ಯ ಪ್ರವಾಸ ಮಾಡಿದ್ದು, ಮತದಾರರು ವ್ಯಾಪಕವಾಗಿ ಬೆಂಬಲಿಸುವ ಆಶಯ ಹೊಂದಿದ್ದೇನೆ. ರಾಜ್ಯಾದ್ಯಂತ ಮತದಾರರ ಪ್ರತಿಕ್ರಿಯೆ ಉತ್ತಮವಾಗಿದ್ದು, ನಾನು ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭವನಗಳ ನಿರ್ಮಾಣ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜತೆಗೆ ವಿಭಾಗೀಯ ಸಾಹಿತ್ಯ ಸಮಾವೇಶಗಳನ್ನು ಮಾಡಿ ಜನಪದ, ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ದಾಸ-ವಚನ, ದಲಿತ, ಬಂಡಾಯ ಸಾಹಿತ್ಯಗಳ ಪ್ರತ್ಯೇಕ ಸಮಾವೇಶಗಳಿಗೆ ಆದ್ಯತೆ ನೀಡಲು ಬದ್ಧನಾಗಿದ್ದೇನೆ. ಉದಯೋನ್ಮುಖ ಬರಹಗಾರರಿಗೆ ಜಿಲ್ಲಾ ಮಟ್ಟದಲ್ಲಿ ಶಿಬಿರಗಳು ಮತ್ತು ಕಮ್ಮಟಗಳ ವ್ಯವಸ್ಥೆ, ಪರಿಷತ್ ವತಿಯಿಂದ ಮಾದರಿ ಕನ್ನಡ ಶಾಲೆಗಳ ಸ್ಥಾಪನೆ ಜತೆಗೆ ಈ ಹಿಂದೆ ಜಾರಿಯಲ್ಲಿದ್ದ ಪುಸ್ತಕ ಸಂತೆ ಹಾಗೂ ಮನೆ ಮನೆಗೆ ಪುಸ್ತಕ ಯೋಜನೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್, ಮೈಕೋ ಕನ್ನಡ ಸಂಘದ ಶಿವಕುಮಾರ್, ಮಲ್ಲಿಕಾರ್ಜುನ ಕೆಂಕೆರೆ, ಕೆಂಬ ರೇಣುಕಯ್ಯ, ಕೆ.ಎಸ್. ಉಮಾಮಹೇಶ್ ಮತ್ತಿತರರು ಉಪಸ್ಥಿತರಿದ್ದರು.