ಕಸಾಪ ಚುನಾವಣೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಿಷ್ಠಿ ರುದ್ರಪ್ಪ ಸ್ಪರ್ಧೆ

ಬಳ್ಳಾರಿ, ಮಾ.31: ಬರುವ ಮೇ 9 ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷ ನಗರದ ನಿಷ್ಠಿ ರುದ್ರಪ್ಪ ಅವರು ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಪರಿಷತ್ತಿನ ಸದಸ್ಯರು, ಹೊತೈಷಿಗಳು, ಬೆಂಲಿಗರು, ಹಿರಿಯರು ಕಣಕ್ಕಿಳಿಯುವಂತೆ ಸಲಹೆ ನೀಡಿದ್ದು ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿರುವುದರಿಂದ ಮತ್ತೊಮ್ಮೆ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಅಧ್ಯಕ್ಷನಾಗಲು ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವೆ ಎಂದಿದಾರೆ.
ಹೆಚ್.ಹಂಪನಗೌಡರ ನಂತರ ಈ ಹಿಂದೆ 2004 ರಿಂದ 2011 ರ ವರೆಗೆ ಎರೆಡು ಅವಧಿಗೆ ಇವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಅವಧಿಯಲ್ಲಿ ಸಹ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಕಳೆದ ಬಾರಿ ತಮ್ಮ ಗುಂಪನಿಂದ ಡಾ.ಅರವಿಂದ ಪಾಟೀಲ್ ಅವರನ್ನು ಕಣಕ್ಕಿಳಿಸಿದ್ದರು. ಅವರು ಸಹ ಜಯ ಸಾಧಿಸಲಿಲ್ಲ.
ನಿಷ್ಠಿ ರುದ್ರಪ್ಪ ಅವರು ಈ ಹಿಂದೆ ಅಧ್ಯಕ್ಷರಾಗಿದ್ದಾಗ ಜಿಲ್ಲೆಯಲ್ಲಿ ಆಗ ಕೇವಲ 40 ದತ್ತಿ ಉಪನ್ಯಾಸಗಳು ಇದ್ದವು ಅವನ್ನು 183 ಕ್ಕೆ ಹೆಚ್ಚಿಸಿ ಒಂದು ರೀತಿ ಪರಿಷತ್ತಿನ ಇತಿಹಾಸದಲ್ಲಿ ದಾಕಲೆ ಮಾಡಿದ್ದರು ಎಂದರೆ ತಪ್ಪಾಗಲಾರದು.
ಕೊಟ್ಟೂರು ಮತ್ತು ಬಳ್ಳಾರಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ಮಾಡಿ ಗಮನಸೆಳೆದಿದ್ದರು.
ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿ ಕೇವಲ 101 ರೂಗಳಿಗೆ ಕನ್ನಡ ಭವನಕ್ಕೆ 1 ಎಕರೆ ನಿವೇಶನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ ತಮ್ಮ ಆಡಳಿತ ಅವಧಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ 17 ಲಕ್ಷ ರೂಗಳನ್ನು ಪರಿಷತ್ತಿನ ಜಿಲ್ಲಾ ಘಟಕದ ಖಾತೆಯಲ್ಲಿ ಸಂಗ್ರಹಿಸಿದ್ದರು. ಕೂಡ್ಲಿಗಿ ತಾಲೂಕು ಖಾನಾಹೊಸಳ್ಳಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ನಿವೇಶನವನ್ನು ಸಹ ಪಡೆದಿದ್ದರು.
ಅನೇಕ ಕೃತಿಗಳನ್ನು ರಚಿಸಿರುವ ಇವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಬಳ್ಳಾರಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ಉತ್ತಮ ಸಂಘಟಕರು, ಜಿಲ್ಲೆಯಲ್ಲಿ ಪರಿಷತ್ತಿನ ಘನತೆಯನ್ನು ಎತ್ತಿಹಿಡಿದವರಾಗಿದ್ದಾರೆ. ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ತೀವ್ರತರವಾದ ಪ್ರಯತ್ನ ನಡೆಸಿದ್ದರು. ಆದರೆ ಇವರು ತಮ್ಮ ಅವಧಿಯಲ್ಲಿ ರಾಜ್ಯದ ಗಡಿ ಒತ್ತವರಿ ಮತ್ತು ರಾಜ್ಯದ ಖನಿಜ ಸಂಪತ್ತನ್ನು ಆಂದ್ರಪ್ರದೇಶದ ಗಡಿ ಭಾಗದಲ್ಲಿ ಕೊಳ್ಳೆಹೊಡೆಯುವಾಗ ಆ ಬಗ್ಗೆ ಧ್ವನಿ ಎತ್ತದೆ ಮೌನವಹಿಸಿದ್ದರು ಎಂಬ ಆರೋಪವನ್ನು ಎದುರಿಸಿದ್ದರು.
ಇವರ ನಂತರ ಆಯ್ಕೆಯಾದ ಸಿರಿಗೇರಿ ಎರ್ರಿಸ್ವಾಮಿ ಅವರು ಪರಿಷತ್ತಿನ ಹಣವನ್ನು ದುರುಪಯೋಗ ಮಾಡಿಕೊಂಡ ಆಪಾದನೆ ಎದುರಿಸುತ್ತಿದ್ದಾರೆ. ಹಾಗಾಗಿ ಅವರು ಚುನಾವಣೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಅವರ ಬೆಂಬಲಿಗರೊಬ್ಬರನ್ನು ಕಣಕ್ಕಿಳಿಸಲಿದ್ದಾರೆ ಎಂದು ತಿಳಿದು ಬಂದಿದೆ. ಹಾಲಿ ಅಧ್ಯಕ್ಷರು ದತ್ತಿ ಉಪನ್ಯಾಸಗಳನ್ನು, ತಾಲೂಕು ಮತ್ತು ಜಿಲ್ಲಾ ಸಮ್ಮೇಳನಗಳನ್ನು ಸಂಘಟಿಸುವಲ್ಲಿ ವಿಪಲರಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹಾಲಿ ಅಧ್ಯಕ್ಷ ಸಿದ್ದರಾಮಕಲ್ಮಠ ಅವರು ನಾಳೆ ನಗರದ ಕನ್ನಡ ಭವನದಲ್ಲಿ ಪರಿಷತ್ತಿನ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದು. ಆ ಸಭೆಯ ನಂತರ ತಾವು ಸ್ಪರ್ಧಿಸಬೇಕೆ. ಇತರರನ್ನು ಕಣಕ್ಕಿಳಿಸಬೇಕೆ ಎಂಬ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಿದ್ದಾರಂತೆ.
ಅಭಿನಯ ಕಲಾ ಕೇಂದ್ರದ ಜಗದೀಶ್. ಓರ್ವ ಮಹಿಳೆ ಸೇರಿಂದತೆ ಹಲವರು ಕಣಕ್ಕಿಳಿಯಲಿದ್ದು. ಈವರೆಗೆ ನೇರವ ಸ್ಪರ್ಧೆ ಇರುತ್ತಿತ್ತು. ಈ ಬಾರಿ ಬಹುತೇಖ ತ್ರಿಕೋನ ಇಲ್ಲವೇ ಚತುಷ್ಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.