ಕಸಾಪ ಚುನಾವಣಾ ಕಣದಲ್ಲಿ ರಾಜಶೇಖರ ಮುಲಾಲಿ

ಕೋಲಾರ,ಏ.೩: ಕನ್ನಡ ಸಾಹಿತ್ಯ ಪರಿಷತ್ತನ್ನು ಸಮಾಜಮುಖಿಯಾಗಿ, ಜಾತ್ಯಾತೀತವಾಗಿ, ಭ್ರಷ್ಟಾಚಾರ ಮುಕ್ತವಾಗಿ ಕೊಂಡೊಯ್ಯುವ ಕನಸು ಹೊತ್ತಿದ್ದು, ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿರುವ ತನ್ನನ್ನು ಬೆಂಬಲಿಸುವಂತೆ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕನ್ನಡ ನಾಡಿನ ಪ್ರಾಥಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಅಸ್ಮಿತೆಯಾಗಿದೆ. ಮೈಸೂರು ರಾಜ್ಯದ ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ರವರಿಂದ ೧೯೧೫ ರಲ್ಲಿ ಚಾಲನೆ ಪಡೆದುಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಶತಮಾನ ಕಂಡಿದೆ. ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದ ಎಚ್.ವಿ.ನಂಜುಂಡಯ್ಯ ರಿಂದ ಮೊದಲ್ಗೊಂಡು ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ.ಹಂಪ ನಾಗರಾಜಯ್ಯ, ಪ್ರೊ. ಚಂದ್ರಶೇಖರ ಪಾಟೀಲ್, ಡಾ.ಸಾ.ಶಿ. ಮರುಳಯ್ಯ ನವರು ಹಾಗೂ ನಮ್ಮ ಬಳ್ಳಾರಿ ಜಿಲ್ಲೆಯವರಾದ ರೇವರೆಂಡ್ ಉತ್ತಂಗಿ ಚನ್ನಪ್ಪ ನವರು ಕೂಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಹುದ್ದೆ ಅಲಂಕರಿಸಿ ಪರಿಷತ್ತಿಗೊಂದು ಘನತೆ ಮತ್ತು ಗಾಂಭೀರ್ಯ ತಂದು ಕೊಟ್ಟಿರುತ್ತಾರೆ ಎಂದರು. ಕಾಲಾನಂತರದಲ್ಲಿ ಸಾಹಿತ್ಯ ಪರಿಷತ್ತು ರಾಜಕಾರಣದ ಸಂಕೊಲೆಗೆ ಸಿಲುಕಿ ಬ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದಲ್ಲಿ ಮುಳುಗೇಳುತ್ತಿದೆ.
ಅಂತೆಯೇ ಕೋಲಾರ ಜಿಲ್ಲೆ ನಾಡಿನ ಏಕಿಕರಣ ಚಳುವಳಿ ಮತ್ತು ಕನ್ನಡ ಪರಿಭಾಷೆಗೆ ನೀಡಿರುವ ಕೊಡುಗೆಯನ್ನು ಕನ್ನಡಿಗರಾರೂ ಮರೆಯುವಂತಿಲ್ಲ. ಕನ್ನಡದ ದೊರೆಗಳಾದ ಕದಂಬರು, ಗಂಗರು, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟರು ಆಳಿದ ಅತಿದೊಡ್ಡ ಚರಿತ್ರೆ ಕೋಲಾರ ಜಿಲ್ಲೆಗಿದೆ. ಇದರೊಂದಿಗೆ ನಾಡಿನ ಹಾಗೂ ದೇಶದ ಬೊಕ್ಕಸಕ್ಕೆ ಚಿನ್ನದ ಗಣಿಗಾರಿಕೆಯ ಮೂಲಕ ಆದಾಯ ಶೇಖರಿಸಿದ ಕೀರ್ತಿ ಕೂಡ ಕೋಲಾರ ಜಿಲ್ಲೆಗಿದೆ. ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರನ್ನು ಕನ್ನಡ ನಾಡಿಗೆ ಬಳುವಳಿಯಾಗಿ ನೀಡಿದ ಇತಿಹಾಸ ಕೋಲಾರ ಜಿಲ್ಲೆಗಿದೆ. ವೈಚಾರಿಕ ಅನುಭಾವದ ಕವಿಗಳಾದ ಕೈವಾರ ನಾರಣಪ್ಪ, ಡಿ.ವಿ.ಗುಂಡಪ್ಪ, ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ, ಅಣೆಕಟ್ಟು ನಿರ್ಮಾತೃ ಸರ್.ಎಂ.ವಿಶ್ವೇಶ್ವರಯ್ಯ ಸೇರಿದಂತೆ ಕನ್ನಡ ಕುಲಕೋಟಿಯ ಪ್ರತಿಧ್ವನಿಯಾಗಿ ಮೈಸೂರು ಸಂಸ್ಥಾನದ ಉಳಿವಿಗೆ ಬೆವರು ರಕ್ತ ಹರಿಸಿದ ಹೈದರಾಲಿ ಹಾಗೂ ಕರ್ನಾಟಕದ ರಾಜಕಾರಣದ ಜನಪರ ಚಿಂತನೆಯ ಕೊನೆಯ ಕೊಂಡಿಯಾಗಿರುವ ಕೆ.ಆರ್.ರಮೇಶಕುಮಾರ ರವರಂತಹ ಮಹನಿಯರನ್ನು ನಾಡಿಗೆ ಬಳುವಳಿಯಾಗಿ ನೀಡಿದ್ದು ಕೋಲಾರದ ಪ್ರಖರ ವೈಚಾರಿಕ ನೆಲವೆಂದರೆ ತಪ್ಪಾಗಲಾರದು. ಕನ್ನಡ ನಾಡಿನಲ್ಲಿಯೇ ಅತ್ಯಂತ ವಿಶಿಷ್ಟ ಹಾಗೂ ಚರಿತ್ರಾರ್ಹ ನೆಲವಾಗಿರುವ ಕೋಲಾರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರು, ದಿನದ ಇಪ್ತ್ನಾಲ್ಕು ಗಂಟೆಯೂ ಕನ್ನಡ ಕಟ್ಟುವಿಕೆಗಾಗಿ ಬದುಕನ್ನು ಮೀಸಲೀಡಲು ತಯಾರಾಗಿರುವ ನನಗೆ ಮತ ನೀಡಿ ಆಶಿರ್ವದಿಸಬೇಕೆಂದು ಮನವಿ ಮಾಡಿದ್ದಾರೆ.