ಕಸಾಪ ಅಧ್ಯಕ್ಷ ಸ್ಥಾನಕ್ಕೆ ಉತ್ಸಾಹದ ಮತದಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ನ.21-  ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರ ಮತ್ತು  ಜಿಲ್ಲಾ ಅಧ್ಯಕ್ಷರ ಚುನಾವಣೆ ಹಿನ್ನಲೆಯಲ್ಲಿ ಇಂದು  ಮತದಾನ ಬೆಳಿಗ್ಗೆ 8 ರಿಂದ ನಡೆಯಿತು.
ಗಣಿನಾಡು ಬಳ್ಳಾರಿಯಲ್ಲಿ ಕಳೆದ ಒಂದು ವಾರದಿಂದ ಬೀಳುತ್ತಿದ್ದ ಮಳೆ ಇಂದು ಬೀಳದೆ ಮತದಾನಕ್ಕೆ ವರುಣ ದೇವ ಅನುಕೂಲ ಮಾಡಿಕೊಟ್ಟಂತಾಗಿದೆ. ಕಾಣದಿದ್ದ ಸೂರ್ಯನ ದರ್ಶನವಾಗಿ ಮತದಾನಕ್ಕೆ ಉತ್ಸಾಹ ತಂದಿತು.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ  19 ಮತಗಟ್ಟೆಗಳನ್ನು ಸ್ಥಾಪಿಸಿದ್ದು. 15071 ಮತದಾರರಿದ್ದಾರೆ. ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ. ನಂತರ  ಮತಗಳ ಎಣಿಕೆ ನಡೆದು ಜಿಲ್ಲಾ ಅಧ್ಯಕ್ಷರು ಯಾರೆಂಬುದು ಇಂದು ಸಂಜೆ ಒಳಗೆ ಫಲಿತಾಂಶ ಹೊರ ಬೀಳಲಿದೆ.
ಬಳ್ಳಾರಿ‌ ನಗರದ ಸರಕಾರಿ‌ ಪದವಿ ಪೂರ್ವ ಪಿಯು (ಮುನಿಸಿಪಲ್) ಕಾಲೇಜ್ ನಲ್ಲಿ ನಾಲ್ಕು ಮತ ಗಟ್ಟೆಗಳನ್ನು ಸ್ಥಾಪಿಸಿದ್ದು. ಮತಕೇಂದ್ರಕ್ಕೆ ಬಂದ ಮತದಾರರಿಗೆ ಕೋವಿಡ್  ಹಿನ್ನಲೆಯಲ್ಲಿ  ಥರ್ಮಲ್ ಸ್ಕಾನಿಂಗ್ ಮತ್ತು ಸ್ಯಾನಿಟೈಸ್ ಮಾಡಿ ಒಳಗಡೆ ಬಿಡಲಾಯಿತು.
ಇದಕ್ಕಾಗಿ ಆಶಾ ಕಾರ್ಯಕರ್ತರನ್ನು ನೇಮಕ‌ ಮಾಡಲಾಗಿತ್ತು.ಆದರೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಖಡ್ಡಾಯವಾಗಿರಲಿಲ್ಲ.
ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿದ್ದ ಹಿರಿಯರು, ಸ್ವಾಮಿಜಿಗಳು, ಜನಪ್ರತಿನಿಧಿಗಳು, ಶಾಸಕರು,ಮಾಜಿ ಶಾಸಕರು ಮತಗಟ್ಟೆಗೆ ಬಂದು ಮತಚಲಾಯಿಸಿದರು.
ನಗರದ ಕಲ್ಯಾಣ ಮಠದ ಶ್ರೀಗಳು, ನಗರ  ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಅನೇಕ ಜನ ಲೇಖಕರು, ಮುತ್ಸದ್ದಿಗಳು ಆಗಮಿಸಿ ಮತ ಚಲಾಯಿಸಿದರು.
ಮತಗಟ್ಟೆ ಮುಂದೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ನಿಂತು ಮತಗಟ್ಟೆಗೆ ಸಾಗಿ ಬಂದವರಲ್ಲಿ ಮತಯಾಚನೆ ಮಾಡಿದರು.
ಮಧ್ಯಾಹ್ನ 12 ಗಂಟೆ ವೇಳೆಗೆ ಶೇ 25  ರಷ್ಟು ಮತದಾನವಾಗಿತ್ತು. ಒಂದು ಗಂಟೆ ವೇಳೆಗೆ ಶೇ 35 ರಷ್ಟು ಮತದಾನವಾಗಿತ್ತು. ಬಿಸಿಲೇರಿದಂತೆ ಮತದಾರರು‌ ಮತಗಟ್ಟೆಗಳತ್ತ ಸಾಗಿಬರುವುದು ಹೆಚ್ಚಿತು.