ಕಸಾಪಾ ರಾಜ್ಯಾಧ್ಯಕ್ಷ ಆಕಾಂಕ್ಷಿ ಮಹೇಶ್ ಜೋಷಿಗೆ ಕೊರೊನಾ

ದಾವಣಗೆರೆ, ಏ.19;ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ನಾಡೋಜ ಡಾ.ಮಹೇಶ ಜೋಶಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ಡಾ.ಮಹೇಶ ಜೋಶಿ ಪ್ರಚಾರಕ್ಕಾಗಿ ರಾಜ್ಯದ 25 ಜಿಲ್ಲೆಗಳ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ, ಪ್ರಚಾರ ಮಾಡಿದ್ದರು. ಉಳಿದ 5 ಜಿಲ್ಲೆಗಳಲ್ಲೂ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಬೆನ್ನಲ್ಲೇ ಡಾ.ಮಹೇಶ ಜೋಶಿಗೆ ಕೊರೋನಾ ಸೋಂಕು ದೃಢಪಟ್ಟಿದೆ.ಕಳೆದ 3 ದಿನಗಳಿಂದಲೂ ಹಾವೇರಿ ಜಿಲ್ಲೆಯ ಅಗಡಿ, ಗುತ್ತಲ, ಹೊಸರಿತ್ತಿ, ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ, ರಾಣೆಬೆನ್ನೂರು ಹಾಗೂ ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಹರಿಹರ, ಚನ್ನಗಿರಿ ತಾಲೂಕಿನಲ್ಲಿ, ದಾವಣಗೆರೆ ನಗರದಲ್ಲಿ ಪ್ರಚಾರದಲ್ಲಿಪಾಲ್ಗೊಂಡಿದ್ದ ಡಾ.ಮಹೇಶ ಜೋಷಿ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ವೈದ್ಯರ ಬಳಿ ಹೋಗಿ, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಪರಿಷತ್‌ನ ಸದಸ್ಯರ ಆರೋಗ್ಯ ತಮಗೆ ಬಹಳ ಮುಖ್ಯವಾಗಿದ್ದು, ಇನ್ನುಳಿದ ದಾವಣಗೆರೆ ಜಿಲ್ಲೆಯ ಬಾಕಿ ತಾಲೂಕುಗಳು, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು ಜಿಲ್ಲೆಗಳ ಪ್ರವಾಸವನ್ನು ರದ್ಧುಗೊಳಿಸಿ, ಡಾ.ಮಹೇಶ ಜೋಷಿ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕಿನಿಂದ ಸಂಪೂರ್ಣ ಗುಣಮುಖರಾದ ನಂತರ ವೈದ್ಯರ ಸಲಹೆ ಮೇರೆಗೆ ಪ್ರವಾಸ ಕೈಗೊಳ್ಳುವೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಯಾನಿಟೈಸರ್ ಬಳಸುವ ಮೂಲಕ ನಿಮ್ಮ ಹಾಗೂ ಇತರರ ಆರೋಗ್ಯವನ್ನೂ ಕಾಪಾಡಿ ಎಂದು ಡಾ.ಮಹೇಶ ಜೋಷಿ ತಿಳಿಸಿದ್ದಾರೆ.