ಕಸವನ್ನು ನಗರಸಭೆ ವಾಹನಕ್ಕೆ ಹಾಕಲು ಮನವಿ

ಕೋಲಾರ,ನ,೧೪:ಮಕ್ಕಳು ಪರಿಸರ ಕುರಿತು ಕಾಳಜಿ ವಹಿಸುವ ಮೂಲಕ ಮನೆ ಕಸವನ್ನು ಪೌರ ಕಾರ್ಮಿಕರ ಗಾಡಿಗೇ ಹಾಕಬೇಕೆಂದು ಪ್ರೊಭೆಷನರಿ ಐಎಎಸ್ ಅಧಿಕಾರಿ ವಿನಾಯಕ್ ಹೇಳಿದರು.
ನಗರದ ಶಾರದಾ ಟಾಕೀಸ್‌ನಲ್ಲಿ ಸರ್‌ಎಂವಿ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಿಗಾಗಿ ನಟ ಪುನೀತ್ ರಾಜ್ ಕುಮಾರ್ ಗಂಧದ ಗುಡಿ ವಿಶೇಷ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲೆಂದರಲ್ಲಿ ಮನೆ ಕಸ ಹಾಕದಂತೆ ಪೋಷಕರಿಗೆ ಅರಿವು ಮೂಡಿಸುವ ಜತೆಗೆ ಪೌರ ಕಾರ್ಮಿಕರ ಕಸದ ಗಾಡಿಗೆ ಹಾಕುವ ಮೂಲಕ ಪರಿಸರ ಕಾಪಾಡಬೇಕೆಂದು ಮನವಿ ಮಾಡಿದರು.
ಸರ್.ಎಂ.ವಿ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಶಬರೀಶ್ ಯಾದವ್ ಮಾತನಾಡಿ, ಪುನೀತ್‌ರಾಜಕುಮಾರ್‌ರ ಕೊನೆ ಚಿತ್ರ ಗಂಧದಗುಡಿ ಡಾಕ್ಯುಮೆಂಟರಿ ನೋಡುವ ಅದೃಷ್ಟ ಕನ್ನಡಿಗರಿಗೆ ಸಿಕ್ಕಿದ್ದು ಸಮಾಜಕ್ಕೆ ಪರಿಸರ ಕಾಪಾಡಬೇಕಾದ ಉತ್ತಮ ಸಂದೇಶ ಸಾರಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಗಂಧದಗುಡಿ ಚಿತ್ರವನ್ನು ಕಡ್ಡಾಯವಾಗಿ ನೋಡಲು ಅನುವಾಗುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಬೇಕು ಎಂದು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷೆ ಶ್ವೇತಾ ಆರ್.ಶಬರೀಶ್ ಮಾತನಾಡಿ, ಗಂಧದಗುಡಿ ವೀಕ್ಷಣೆ ನಂತರ ನಗರಸಭೆ ಪೌರಾಯುಕ್ತರು ಮತ್ತು ಎಲ್ಲ ಸದಸ್ಯರ ಜತೆಗೂಡಿ ಸ್ವಚ್ಛತಾ ಅಭಿಯಾನ ಮತ್ತಷ್ಟು ವೇಗಗತಿಯಲ್ಲಿ ನಡೆಸಲು ಚಿಂತನೆ ನಡೆಸಲಾಗಿದ್ದು ನಗರದ ಎಲ್ಲ ಶಾಲಾ-ಕಾಲೇಜುಗಳ ಬಳಿ ಸ್ವಚ್ಛತಾ ಅಭಿಯಾನ ಕಡ್ಡಾಯವಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸರ್.ಎಂ.ವಿ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಿನ್ಸಿಪಾಲ್ ಶ್ರೀದೇವಿ ಬಾಯಿ, ಅಧ್ಯಕ್ಷ ರಮೇಶ್ ಯಾದವ್ ಇದ್ದರು.