ಕಸ,ರೋಗ ಮುಕ್ತ ಸಮಾಜಕ್ಕಾಗಿ ಶ್ರಮಿಸೋಣ

ಕೋಲಾರ, ಅ. ೩- ಮಹಾತ್ಮಾ ಗಾಂಧೀಜಿಯವರು ಸಮಾಜಕ್ಕೆ ಶ್ರಮದಾನದ ಮಹತ್ವ ತಿಳಿಸಿಕೊಟ್ಟಿದ್ದು, ಅದನ್ನು ನಾವು ಪಾಲಿಸೋಣ ಕಸ ಮುಕ್ತ, ರೋಗಮುಕ್ತ ಸುಂದರ ಸಮಾಜ ನಿರ್ಮಿಸಲು ಗ್ರಾ.ಪಂ ಮತ್ತು ಪೌರಕಾರ್ಮಿಕರೊಂದಿಗೆ ಕೈಜೋಡಿಸೋಣ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ಮುನಿಯಪ್ಪ ಕರೆ ನೀಡಿದರು.
ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅವರು ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.
ಪ್ಲಾಸ್ಟಿಕ್ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ನಾವೆಲ್ಲಾ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಸದಿರಲು ಸಂಕಲ್ಪ ಮಾಡೋಣ, ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದರು.ಬೆಗ್ಲಿ ಹೊಸಳ್ಳಿ ಗ್ರಾಪಂ ಅಧ್ಯಕ್ಷೆ ದೀಪಿಕಾ ಲೋಕೇಶ್ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿಗೆ ಈ ಸಾಲಿನ ಗಾಂಧಿ ಪುರಸ್ಕಾರ ಬಂದಿದ್ದು, ಇದಕ್ಕೆ ಕಾರಣರಾದ ಎಲ್ಲಾ ಸದಸ್ಯರು, ಸಿಬ್ಬಂದಿಗೆ ಧನ್ಯವಾದ ತಿಳಿಸಿ, ಈ ಗೌರವ ಉಳಿಸಿಕೊಂಡು ಮುನ್ನಡೆಯೋಣ, ಗ್ರಾಮ ಪಂಚಾಯಿತಿಯನ್ನು ಜಿಲ್ಲೆಗೆ ಮಾದರಿಯಾಗಿಸೋಣ ಎಂದು ಕರೆ ನೀಡಿದರು.
ಸ್ವಚ್ಚತಾ ಅಭಿಯಾನದಲ್ಲಿ ಮುದುವತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಮ್ಮ ಹನುಮಂತಪ್ಪ, ಬೆಗ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಚ್.ಸಿ.ಮಧುಮತಿ, ಮುದುವತ್ತಿ,ಬೆಗ್ಲಿ ಗ್ರಾ.ಪಂಗಳ ಕಾರ್ಯದರ್ಶಿ ಶ್ರೀನಿವಾಸಗೌಡ, ರತ್ನಮ್ಮ ಮಾಜಿ ಅಧ್ಯಕ್ಷರು ಸದಸ್ಯರಾದದ ಗಂಗರಾಜು, ಗ್ರಾ.ಪಂ ಸದಸ್ಯ ರಘು ಸರಸ್ವತಿ, ಶ್ರೀನಿವಾಸಪ್ಪ, ಪ್ರೇಮ, ಚಲಪತಿ, ಪಂಚಾಯ್ತಿಯ ಎಲ್ಲಾ ಸಿಬ್ಬಂದಿ ವರ್ಗದವರು ಜಲಗಾರರು ಸಂಜೀವಿನಿ ಒಕ್ಕೂಟದವರು, ಎನ್‌ಆರ್‌ಎಲ್‌ಎಂ ಸಮಾಲೋಚಕರು ತಾಲೂಕು ಪಂಚಾಯಿತಿ ಸ್ತ್ರೀ ಶಕ್ತಿ ಸಂಘದವರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಸಮುದಾಯ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರು ಎಲ್ಲರೂ ಕೋರಗಂಡಹಳ್ಳಿ ಕೋನಾಪುರ ಗ್ರಾಮವನ್ನು ಸ್ವಚ್ಛತೆ ಮಾಡುವುದರೊಂದಿಗೆ ಸ್ವಚ್ಛತೆಯ ಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸಾಹಸ್ ಸಂಸ್ಥೆಯವರಿಂದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು ವಿಜೇತರಿಗೆ ತಾಪಂ ಇಒ ಪಿ.ಮುನಿಯಪ್ಪ ಬಹುಮಾನ ವಿತರಿಸಿದರು.