ಕಸದ ವಾಹನದ ಮೇಲೆ ಬಿಬಿಎಂಪಿ ನಾಮಫಲಕ ಹಾಕಲು ನಿರ್ಬಂಧ

ಬೆಂಗಳೂರು, ಜು.೨೩- ಬಿಬಿಎಂಪಿ ಕಸದ ವಾಹನಗಳಿಂದ ಇತ್ತೀಚಿಗೆ ನಡೆದ ಪ್ರಾಣಹಾನಿ ಹಿನ್ನೆಲೆ ಪಾಲಿಕೆ ಕಸದ ವಾಹನಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಪ್ರಮುಖವಾಗಿ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ ಎಂದು ನಿರ್ದೇಶಿಸಲಾಗಿದೆ.

ಗುತ್ತಿಗೆದಾರರು ಮೂಲಕ ಸರಬರಾಜು ಮಾಡಲಾದ ಎಲ್ಲಾ ವಾಹನಗಳಿಗೂ ಈ ಆದೇಶ ಅನ್ವಯ ಆಗಲಿದ್ದು, ಒಂದೊಮ್ಮೆ ಸದರಿ ಕಸದ ವಾಹನಗಳಿಂದ ಅಪಘಾತ ಸಂಭವಿಸಿ ಸಾವು ನೋವಾದರೆ. ದಂಡದ ರೂಪದಲ್ಲಿ ಆ ವಾಹನ ಮಾಲೀಕರೇ ಪರಿಹಾರ ನೀಡಬೇಕು ಎಂದು ತಿಳಿಸಲಾಗಿದೆ.

ಖಾಸಗಿಯವರ ಸ್ವಂತ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಅಳವಡಿಕೆಯನ್ನು ಸಂಪೂರ್ಣ ಹಿಂಪಡೆಯಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಮಾರ್ಗಸೂಚಿಗಳೇನು?:
ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಕೋಶದ ಗುತ್ತಿಗೆದಾರರ ಮೂಲಕ ಸರಬರಾಜು ಮಾಡಲಾದ ಎಲ್ಲಾ ಆಟೋ ಟಿಪ್ಪರಗಳು ಕಾಂಪ್ಯಾಕ್ಟರ್‌ಗಳ ಪಾಲಿಕೆಯ ಸೇವೆಯಲ್ಲಿ ಬಿಬಿಎಂಪಿ ಸೇವೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಇತರ ಎಂದು ನಮೂದಿಸುವುದನ್ನ ತಕ್ಷಣದಿಂದ ನಿಷೇಧಿಸಲಾಗಿದೆ.

ಪಾಲಿಕೆಗೆ ಪಾಲಿಕೆಯ ಸಂಬಂಧಿಸಿರದ ಅನಾಮಧೇಯ ವಾಹನಗಳು ಬೆಂಗಳೂರು ಮಹಾನಗರ ಸೇವೆಯಲ್ಲಿ ಬಿಬಿಎಂಪಿ, ಇತರೆ ಎಂದು ನಾಮಫಲಕ ಹಾಕಿದ್ದಲ್ಲಿ ಅಂತಹ ವಾಹನಗಳ ಮೇಲೆ ಮತ್ತು ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು.

ಎಲ್ಲಾ ಚಾಲಕರ ವಾಹನ ಚಾಲನಾ ಪರವಾನಿಗೆ , ವಾಹನ ಚಲಿಸಲು ದೈಹಿಕ ಸಧೃಡತೆಯ ಪ್ರಮಾಣ ಪತ್ರ , ವಾಹನದ ಪೀಟ್ನೆಸ್ ಪ್ರಮಾಣ ಪತ್ರ , ಇನ್ಸುರೆನ್ಸ್ ಪ್ರಮಾಣ ಪತ್ರಗಳ ತಪಾಸಣೆ ಹಾಗೂ ಅವಶ್ಯ ಕಾಯ್ದೆಗಳನ್ವಯ ಇತರ ತಪಾಸಣೆಗಳನ್ನು ಸಹ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಕೈಗೊಳ್ಳುವುದು .

ವಲಯ ಮತ್ತು ವಾರ್ಡ್ ಮಾರ್ಷಲ್‌ಗಳು, ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಕಾರ್ಯಾಚರಣೆಯ ರಸ್ತೆಗಳಲ್ಲಿ ಇಂತಹ ಅನಧಿಕೃತವಾಗಿ ಪಾಲಿಕೆಯ ಹೆಸರನ್ನು ನಮೂದಿಸಿರುವ ನಾಮಫಲಕಗಳನ್ನ ಹಾಕಿರುವ ವಾಹನಗಳನ್ನು ನಿಲ್ಲಿಸಿ ಕೂಡಲೇ ತೆಗೆಸುವುದು

ಒಂದು ವೇಳೆ ಗುತ್ತಿಗೆದಾರರಿಗೆ ಪಾಲಿಕೆಯ ಹೆಸರು ನಮೂದು ನಾಮಫಲಕಗಳಿಲ್ಲದೇ ಘನತ್ಯಾಜ್ಯ ಸಂಗ್ರಹಣೆ , ಸಾಗಾಣೆ ಮತ್ತು ವಿಲೇವಾರಿಯಲ್ಲಿ ತೊಂದರೆಯಾಗುತ್ತಿದ್ದಲ್ಲಿ , ಮುಂಚಿತವಾಗಿಯೇ ಅಧೀಕ್ಷಕ ಅಭಿಯಂತರರಿಂದ ಲಿಖಿತ ರೂಪದಲ್ಲಿ ಮಾನ್ಯತೆಯ ಅವಧಿಯೊಂದಿಗೆ ಅನುಮತಿ ಪತ್ರವನ್ನು ಪಡೆದು ಘನತ್ಯಾಜ್ಯ ಸಂಗ್ರಹಣೆ , ಸಾಗಾಣೆಯ ಕಾರ್ಯವನ್ನು ನಿರ್ವಹಿಸುವುದು.

ಕಾರ್ಯಚರಣೆಯ ಸಮಯದಲ್ಲಿ ಪೋಲಿಸ್ ಇತರೆ ಅಧಿಕಾರಿಗಳು ಕೇಳಿದ್ದಲ್ಲಿ , ಈ ಪತ್ರವನ್ನು ಸಲ್ಲಿಸುವುದು. ಅದೇ ರೀತಿ, ಅನಧಿಕೃತವಾಗಿ ಗುತ್ತಿಗೆದಾರರ ವಾಹನಗಳ ಮೇಲೆ ಪಾಲಿಕೆಯ ಸೇವೆಯಲ್ಲಿ ಬಿಬಿಎಂಪಿ ಇತರ ನಮೂದಿಸಿ ನಾಮಫಲಕ ಅಳವಡಿಸಿರುವುದು ಪಾಲಿಕೆಯ ಪೊಲಿಸ್ ಇಲಾಖೆಯ ಇತರೆ ಅಧಿಕಾರಿಗಳ ಗಮನಕ್ಕೆ ಬಂದರೆ , ಅಂತಹ ವಾಹನಗಳ ಚಾಲಕರ ಮೇಲೆ ಮತ್ತು ಮಾಲೀಕರ ಮೇಲೆ ಕಾನೂನಾತ್ಮಕವಾಗಿ ಕ್ರಮಜರುಗಿಸುವುದು ಎಂದು ಎಚ್ಚರಿಕೆ ನೀಡಲಾಗಿದೆ.