ಕಸದ ಬುಟ್ಟಿ ಸೇರಿದ ರಾಮರಾಜ್ಯ ಕಲ್ಪನೆ

ಧಾರವಾಡ,ಜು21: ಗಾಂಧೀಜಿ ಗ್ರಾಮ ಸ್ವರಾಜ್ಯ ಪುಸ್ತಕದಲ್ಲಿ ಆಡಳಿತ ವಿಕೇಂದ್ರೀಕರಣವೇ `ರಾಮರಾಜ್ಯ’ ಅಂತ ಕರೆದರು. ಆದರೆ, ಸ್ವಾತಂತ್ರ್ಯ ನಂತರ ಅವರ ಕಲ್ಪನೆ ಕಾಂಗ್ರೆಸ್ ಕ್ರಿಯಾನ್ವಗೊಳಿಸಿದ ಹಿನ್ನಲೆ ಕಸದ ಬುಟ್ಟಿ ಸೇರಿತೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಬೌದ್ಧಿಕ ಪ್ತಮುಖ ಸ್ವಾಂತರಂಜನ್ ವಿಷಾದಿಸಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಧಾರವಾಡ ನಗರ ಘಟಕ ಇಲ್ಲಿನ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರಾವ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಸ್ವರಾಜ್ಯ-75 ಕುರಿತು ಅವರು ಉಪನ್ಯಾಸ ನೀಡಿದರು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಏಕಾಏಕಿ ನಡೆಯಲಿಲ್ಲ. ನಾನಾಸಾಹೇಬ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆ, ಮಂಗಲಪಾಂಡೆ ಅನೇಕರು ಬ್ರಿಟಿಷ್ ಆಡಳಿತ ವಿರೋಧಿಸಿ ಧಂಗೆ ಎದ್ದು, 1857ರಲ್ಲಿ ಸಂಗ್ರಾಮ ಆರಂಭವಾಯಿತು ಎಂದು ತಿಳಿಸಿದರು.
ಬಂಗಾಳ, ಬಿಹಾರ, ಉತ್ತರಪ್ರದೇಶ, ಖಾನಪುರ, ಲಕನೌ ಮುಂತಾದ ಕಡೆ ಸಂಗ್ರಾಮ ವಿಸ್ತಾರವಾಯಿತು. ಈ ಯುದ್ಧದಲ್ಲಿ ಸೈನಿಕರು, ವ್ಯಾಪರಿಗಳು, ವಿದ್ಯಾರ್ಥಿಗಳು, ಸಾಮಾನ್ಯರು ಸೇರಿ ಸುಮಾರು 3-4 ಲಕ್ಷ ಜನ ದೇಶಕ್ಕೆ ಬಲಿದಾನ ಮಾಡಿದ್ದಾರೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕೇವಲ ಅಹಿಂಸೆ ಹೋರಾಟದಿಂದ ಎಂದು ಕೆಲವರು ಹೇಳುವುದು ವಿಪರ್ಯಾಸ. ಮಾನಗರ್, ಜಲಿಯನ್ ವಾಲಾಬಾಗ್ ಮುಂತಾದ ಹತ್ಯಾಕಾಂಡಗಳಲ್ಲಿ ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
ವನವಾಸಿಗಳ ಮೇಲೆ ನಿರ್ಬಂಧ ವಿಧಿಸಿದಾಗ ಸಂಘಸ್ಥಾಪಕ ಡಾ. ಹೆಡಗೆವಾರ ಜಂಗಲ್ ಸತ್ಯಾಗ್ರಹ ನಡೆಸಿ ಬ್ರಿಟಿಷರನ್ನು ವಿರೋಧಿಸಿದ್ದರು. ಈ ದಿಶೆಯಲ್ಲಿ ಕಾರ್ಯನಿರ್ವಹಿಸಿದ ಸಾವರಕರ್, ಆಝಾದ, ಸುಭಾಷ್ ಚಂದ್ರ ಬೋಸ್ ಮುಂತಾದವರ ತ್ಯಾಗ, ಬಲಿದಾನ ಸ್ಮರಿಸಬೇಕು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಕ್ತಿ ಆಂದೋಲನ ಮಹತ್ವ ಪಡೆದಿದೆ. ದಕ್ಷಿಣದ ಭಾರತದಲ್ಲಿ ರಾಮಾನುಜಾಚಾರ್ಯರಿಂದ ಮೊದಲ ಆರಂಭಗೊಂಡ ಭಕ್ತಿ ಆಂದೋಲನ, ಉತ್ತರದಲ್ಲಿ ರಾಮಾನಂದ ಆಚಾರ್ಯರು ಭಕ್ತು ಆಂದೋಲನವನ್ನು ವಿಸ್ತರಿಸಿದರು.
ಆಂದೋಲನದಲ್ಲಿ ಸಂತ ಕಬೀರದಾಸ, ರವಿದಾಸ ಪ್ರಖ್ಯಾತ ಸಂತರಾಗಿ ಹೊರಹೊಮ್ಮಿದರು. ಭಕ್ತಿ ಪಂಥ ದೇವಸ್ಥಾನದ ಬಗ್ಗೆ ಶ್ರದ್ಧೆ ಬೆಳೆಸಿತು. ಸಂತ ತುಳಸಿದಾಸ ರಾಮಾಯಣ ಬಗ್ಗೆ ಎಲ್ಲೆಡೆ ಪ್ರಚಾರ ನಡೆಸಿ, ಜನರಲ್ಲಿ ರಾಜಾ ಶ್ರೀರಾಮಚಂದ್ರನ ಬಗ್ಗೆ ಶ್ರದ್ಧೆ ಬೆಳೆಸಿದರು ಎಂದರು.
ನಮ್ಮ ಇತಿಹಾಸ, ಪೂರ್ವಜರ ತ್ಯಾಗ-ಬಲಿದಾನ ಹೊಸ ಪೀಳಿಗೆಗೆ ತಿಳಿಸುವ ಕೆಲಸ ನಡೆಬೇಕು. ಸರ್ವೆ ಭವಂತು ಸುಖಿನಃ ಎಂದ ದೇಶ ನಮ್ಮದು. ಕೋವಿಡ್ ಲಸಿಕೆ ತಯಾರಿಸಿದ ನಾವಷ್ಟೆ ಬಳಸದೆ, ಎಲ್ಲ ದೇಶಗಳಿಗೆ ರಫ್ತು ಮಾಡಿದೆವು. ಪ್ರಸ್ತುತ ಶ್ರೀಲಂಕಾದ ಸಂದಿಗ್ಧ ಸ್ಥಿತಿಯಲ್ಲಿ ಚೀನಾ ಕೈಬಿಟ್ಟರೂ, ಭಾರತ ಶ್ರೀಲಂಕಾಗೆ ಸಹಕರಿಸುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.
ನಂತರ ಸಾರ್ವಜನಿಕರೊಂದಿಗೆ ಸಂವಾದ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧಾರವಾಡ ವಿಭಾಗದ ಕಾರ್ಯವಾಹ ಮಧುಸೂದನ್ ಕುಲಕರ್ಣಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೀರ ಇದ್ದರು. ಜೈಭವಾನಿ ನಲವಡಿ ವೈಯಕ್ತಿಕ ಗೀತೆ ಹೇಳಿದರು.