ಕಸದ್ದೇ ದೊಡ್ಡ ಸಮಸ್ಯೆ ಮುಕ್ತಿ ಯಾವಾಗ?

ಮಳೆಗಾಲ ಆರಂಭಕ್ಕೆ ಇನ್ನೂ ಎಚ್ಚೆತ್ತುಕೊಳ್ಳದ ಸುಳ್ಯ ನಗರಾಡಳಿತ | ಹಲವು ಕಡೆ ಅರ್ಧದಲ್ಲಿರುವ ಸೇತುವೆ ಕಾಮಗಾರಿಗಳು-ಮಳೆಗಾಲದಲ್ಲೂ ಮುಗಿಯದ ಗೋಲು
ಸುಳ್ಯ, ಮೇ ೨೯- ಕೊರೋನಾ ಕಾಟದ ನಡುವೆಯೂ ಮಳೆಗಾಲ ಸುರುವಾಗಿದೆ. ಆದರೆ ಸುಳ್ಯ ನಗರ ಸೇರಿದಂತೆ ಹಲವು ಕಡೆ ಚರಂಡಿಗಳು ಕಸ ಮತ್ತು ಗಿಡಗಂಟೆಗಳಿಂದ ತುಂಬಿಕೊಂಡಿದೆ. ನಗgಪಂಚಾಯಿತಿ ಆವರಣದಲ್ಲೇ ಕಸದ ಗುಡ್ಡೆ, ಚರಂಡಿಗಳಲ್ಲೇ ಬ್ಲಾಕ್ -ಕೊಳಚೆ ನೀರು ಸರಾಗವಾಗಿ ಹರಿದು ಹೋಗದ ಸ್ಥಿತಿ ನಿರ್ಮಾಣ ಆಗಿದೆ. ಕಸದಿಂದ ನಾನಾ ರೋಗಗಳಿಗೆ ಆಹ್ವಾನ. ನಗರ ಸೌಂದರ್ಯ ಮತ್ತು ಸ್ವಚ್ಚತೆಗೆ ತೊಡಕಾಗಿದೆ.
ಸುಳ್ಯ ನಗರದ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಚರಂಡಿಗಳು ಕಸ, ಮಣ್ಣು, ಗಿಡಗಳು ತುಂಬಿ ಬ್ಲಾಕ್ ಆಗಿದೆ. ಈಗಾಗಲೇ ಸುರಿಯುತ್ತಿರುವ ಮಳೆಗಾಲದ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಹರಿದು ಹೋಗುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಆಗುತ್ತಿದೆ. ವಾರ್ಡ್‌ಗಳ ರಸ್ತೆಗಳ ಚರಂಡಿಗಳು ಬ್ಲಾಕ್ ಆಗಿದೆ. ಜಟ್ಟಿಪಳ್ಳಕ್ಕೆ ಹೋಗುವ ರಸ್ತೆಯಲ್ಲಿ ಚರಂಡಿಗಳು ಸಂಪೂರ್ಣ ಬ್ಲಾಕ್ ಆಗಿದೆ. ಸುಳ್ಯದ ನಗರದಲ್ಲಿ ಅಳವಡಿಸಿದ ಒಳಚರಂಡಿ ಯೋಜನೆ ಕೂಡ ಸಮರ್ಪಕವಾಗಿಲ್ಲ. ಬೇಸಿಗೆ ಸೇರಿದಂತೆ ಮಳೆಗಾಲದಲ್ಲಿ ಕೂಡ ಮ್ಯಾನ್ ಹೋಲ್‌ಗಳು ಬ್ಲಾಕ್ ಆಗಿ ಕೊಳಚೆ ನೀರು ರಸ್ತೆಯಲ್ಲಿ ಹರಿದು ಹೋಗುತ್ತದೆ. ಈಗಲಾದರೂ ನಗರ ಪಂಚಾಯಿತಿ ಎಚ್ಚೆತ್ತು ಮುಖ್ಯ ಚರಂಡಿಗಳನ್ನು ಸ್ವಚ್ಚಗೊಳಿಸಬೇಕಾಗಿದೆ.
ತಾಲೂಕು ಆಡಳಿತ ಸಿದ್ದತೆ
ಮಳೆಗಾಲ ಆರಂಭಕ್ಕೂ ಮೊದಲೇ ನದಿಗಳಲ್ಲಿ ನೀರು ಹೆಚ್ಚಾಗುತ್ತಿದೆ. ತಾಲೂಕಿನ ಜೀವನದಿ ಪಯಸ್ವಿನಿ ಮತ್ತು ಇತರ ಉಪನದಿಗಳಲ್ಲಿ ಕೂಡ ನೀರಿನ ಹರಿವು ಹೆಚ್ಚಾಗುವ ಸಂದರ್ಭ ನದಿ ಬದಿಗಳಲ್ಲಿ ತೆರಳದಂತೆ ತಾಲೂಕು ಆಡಳಿತ ಸೂಚನೆ ನೀಡಿದೆ. ಮಳೆಗಾಲದ ಮುಂಜಾಗ್ರತೆಗೆ ಈಗಾಗಲೇ ಆಗ್ನಿಶಾಮಕ ದಳ, ಸುಳ್ಯ ಪೈಚಾರಿನ ನುರಿತ ಈಜುಗಾರರ ತಂಡವನ್ನು ರಚಿಸಿಕೊಂಡಿದೆ. ರಬ್ಬರ್ ಬೋಟ್‌ನ್ನು ಸಿದ್ದಗೊಳಿಸಿದೆ. ಈಗಾಗಲೇ ಒಂದು ಬಾರಿ ಸಹಾಯಕ ಕಮಿಷನರ್ ಅಧ್ಯಕ್ಷತೆಯಲ್ಲಿ ಮಳೆಗಾಲ ಮುಂಜಾಗೃತ ಸಭೆ ನಡೆದು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಕಸದ್ದೇ ದೊಡ್ಡ ಸಮಸ್ಯೆ ಮುಕ್ತಿ ಯಾವಾಗ?
ಸುಳ್ಯ ನಗರದ ಬಹು ದೊಡ್ಡ ಸಮಸ್ಯೆ ತ್ಯಾಜ್ಯ ವಿವೇವಾರಿ. ಹಲವು ವರ್ಷಗಳಿಂದ ಸುಳ್ಯ ನಗರದಿಂದ ಸಂಗ್ರಹಿಸುವ ಕಸಗಳನ್ನು ತಂದು ನಗರ ಪಂಚಾಯಿತಿ ಆವರಣದಲ್ಲೇ ಹಾಕಲಾಗುತ್ತಿದೆ. ಆವರಣದಲ್ಲಿ ಹಾಕಲಾಗುವ ಒಣ ಕಸಗಳನ್ನು ವಿಲೇವಾರಿ ಮಾಡಲಾಗದೇ ನ.ಪಂ ಕೈಕಟ್ಟಿ ಕುಳಿತಿದೆ. ಆವರಣದಲ್ಲಿ ಸಂಗ್ರಹಗೊಂಡ ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲಿದ್ದು ನಾನಾ ರೋಗಗಳಿಗೆ ಆಹ್ವಾನ ನೀಡುತ್ತಿದೆ. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ವರ್ಷ ಹತ್ತಿರ ಆಗುತ್ತಾ ಬಂದರೂ ಕಸ ವಿಲೇವಾರಿಗೆ ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಿದೆ.
ಅರ್ಧಕ್ಕೆ ಬಾಕಿಯಾದ ಕಾಮಗಾರಿಗಳು:ನಗರ ಪ್ರದೇಶ ಬಿಟ್ಟು ತಾಲೂಕಿನ ಹಲವು ಕಡೆ ಪ್ರಮುಖ ಸೇತುವೆಗಳು, ರಸ್ತೆ ಸಂಪರ್ಕಗಳು ಈ ಮಳೆಗಾಲದಲ್ಲಿಯೂ ಮುಕ್ತವಾಗುವ ಲಕ್ಷಣ ತೋರುತ್ತಿಲ್ಲ. ಅರಂಬೂರು, ಮರ್ಕಂಜ, ಎಲಿಮಲೆ ಮುಂತಾದ ಗ್ರಾಮೀಣ ಪ್ರದೇಶಗಳ ಜನರು ಸುತ್ತು ಬಳಸಿ ಮನೆ ಸೇರುವಂತೆ ಮಳೆಗಾಲ ಮಾಡಿದೆ.
ಕಾಮಗಾರಿ ಆರಂಭಿಸಿ ವರ್ಷ ನಾಲ್ಕು ಸಂದರೂ ಅರಂಬೂರು ಸೇತುವೆ ಅಪೂರ್ಣ:ಕಾಮಗಾರಿ ಆರಂಭಗೊಂಡು ಬರೋಬರಿ ೪ ವರ್ಷ ಕಳೆದರೂ ಇನ್ನೂ ಸುಳ್ಯ ನಗರ ಸಮೀಪದ ಅರಂಬೂರು ಸೇತುವೆ ಕಾಮಗಾರಿ ಪೂರ್ತಿಯಾಗಿಲ್ಲ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಬಳಕೆ ಆಗುತ್ತಿದೆ ಎಂದು ಭರವಸೆ ನೀಡಿದ್ದರೂ ಜನರಿಗೆ ಮಾತ್ರ ಸಂಚಾರ ಮುಕ್ತಗೊಂಡಿಲ್ಲ. ಅರಂಬೂರು ಶಾಲೆಯ ಹತ್ತಿರದಲ್ಲೇ ಹಾದು ಹೊಗುವ ಈ ಸೇತುವೆಯ ಮೂಲಕ ಆಲೆಟ್ಟಿ ಗ್ರಾಮದ ಮಜಿಗುಂಡಿ, ಕೂಟೇಲು, ಅಂಜಿಕಾರ್. ನೆಡ್ಚಿಲ್, ಪಾಲಡ್ಕ ಪ್ರದೇಶಗಳಿಗೆ ಹೋಗಬಹುದು. ಈಗ ಈ ಪ್ರದೇಶಗಳಿಗೆ ಹೋಗಲು ತೂಗು ಸೇತುವೆಯ ವ್ಯವಸ್ಥೆ ಇದೆ. ಈ ತೂಗು ಸೇತುವೆಯ ಮೂಲಕ ಹೋಗುವ ಸ್ಥಳೀಯರು ಪಡಿತರ ಅಂಗಡಿ ಸಾಮಾಗ್ರಿಗಳನ್ನು ತಲೆಯಲ್ಲಿ ಹೊತ್ತುಕೊಂಡೆ ಸಾಗಬೇಕು. ಕುಟುಂಬದ ಸದಸ್ಯರಿಗೆ ಅಸೌಖ್ಯ ಕಾಣಿಸಿಕೊಂಡರೆ ತೂಗು ಸೇತುವೆಯಲ್ಲಿ ಹೊತ್ತುಕೊಂಡು ಬಳಿಕ ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸುವ ಅನಿವಾರ್ಯತೆ ಇಲ್ಲಿನ ಪ್ರದೇಶಗಳ ಜನರದ್ದು. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇದೇ ತೂಗು ಸೇತುವೆಯನ್ನೇ ಆಶ್ರಯಿಸಬೇಕು. ಒಂದು ಭಾಗದ ಜನತೆಯ ಬಹುಕಾಲದ ಬೇಡಿಕೆ ಈ ಸೇತುವೆ. ಆದರೆ ಕಾಮಗಾರಿ ಪೂರ್ತಿಯಾಗದೆ ಕುಂಟುತ್ತಿರುವ ಕಾರಣ ಜನರ ನಿರೀಕ್ಷೆಯೇ ಹುಸಿಯಾಗುತಿದೆ.
ಮರ್ಕಂಜ ಸೇತುವೆ ಕಾಮಗಾರಿ ನೆನೆಗುದಿಗೆ-ಅಪಾಯಕಾರಿ ಹೊಂಡ ನಿರ್ಮಾಣ:ಹಲವು ವರ್ಷಗಳ ಬೇಡಿಕೆಯಾಗಿದ್ದ ಮಕಂಜದಿಂದ ದೊಡ್ಡಹಿತ್ಲು, ಕೊಂಪುಳಿ ಕಡೆಗೆ ಹೋಗುವ ರಸ್ತೆಗೆ ಕುದುರೆಗುಂಡಿ ಎಂಬಲ್ಲಿ ನಿರ್ಮಾಣವಾಗಬೇಕಿದ್ದ ಸೇತುವೆಯ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಸೇತುವೆ ನಿರ್ಮಿಸಲು ಎರಡು ಕಡೆ ಮಾಡಿರುವ ಭಾರೀ ಗಾತ್ರದ ಹೊಂಡಗಳು ಮಳೆಗಾಲದಲ್ಲಿ ಅಪಾಯದ ಸೂಚನೆಯನ್ನು ನೀಡುತ್ತಿದೆ. ಮೊನ್ನೆ ಸುರಿದ ಭಾರಿ ಮಳೆಗೆ ೨ ಹೊಂಡದಲ್ಲಿಯೂ ನೀರು ನಿಂತಿದೆ. .ಹೀಗಾಗಿ ಮಳೆಗಾಲದಲ್ಲಿ ವಾಹನಗಳು ಈ ನದಿ ದಾಟುವಂತಿಲ್ಲ. ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಬೆಳಿಗ್ಗೆ ಮತ್ತು ಸಂಜೆ ಜೀವಾಭಯದಿಂದ ದಾಟಿಸಬೇಕಾಗುತ್ತದೆ. ಅನಾರೋಗ್ಯ ಬಾಧಿಸಿದಲ್ಲಿಯೂ ಹೊತ್ತುಕೊಂಡೇ ದಾಟಬೇಕಾಗುತ್ತದೆ. ಇದೀಗ ಈ ದೊಡ್ಡ ಹೊಂಡ ತೆಗೆದಿಟ್ಟು ಹೋಗಿದ್ದಾರೆ. ಒಂದು ವೇಳೆ ಸಾರ್ವಜನಿಕರು ಅಥವಾ ದನಕರುಗಳು ಈ ಹೊಂಡಕ್ಕೆ ಬಿದ್ದು ಜೀವ ಕಳೆದುಕೊಂಡರೆ ಯಾರು ಹೊಣೆ. ಸೇತುವೆ ನಿರ್ಮಿಸದಿದ್ದರೆ ಹೊಂಡವನ್ನಾದರೂ ಮುಚ್ಚಿಕೊಡಿ ಎನ್ನುತ್ತಾರೆ ಸ್ಥಳೀಯರು.
ಅರಂತೋಡು – ಎಲಿಮಲೆ ರಸ್ತೆಯ ಸೇವಾಜೆ ಬಳಿ ಇದ್ದ ಸೇತುವೆಯನ್ನು ಸಂಪೂರ್ಣ ಕೆಡವಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದು ಅಕಾಲಿಕವಾಗಿ ಆರಂಭವಾದ ಮಳೆಯಿಂದ ಸೇತುವೆ ಕಾಮಗಾರಿಗೆ ತೊಡಕಾಗಿ ಕಾಮಗಾರಿ ಅರ್ಧದಲ್ಲೇ ನಿಂತ ಪರಿಣಾಮ ರಸ್ತೆ ಸಂಪೂರ್ಣ ಬಂದ್ ಆಗಿದೆ. ಮಳೆ ಸುರಿದ ಪರಿಣಾಮ ಹೊಳೆಯ ನೀರು ಏಕಾ ಏಕಿ ಏರಿ ತಾತ್ಕಾಲಿಕ ರಸ್ತೆಯು ನೀರಿನಲ್ಲಿ ಕೊಚ್ಚಿ ಹೋಗಿದೆ. ಪರಿಣಾಮ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಇದೀಗ ತಾತ್ಕಲಿಕ ದುರಸ್ಥಿ ಮಾಡಿದ್ದರೂ ಸಂಚಾರಿಸಲು ಸಾಧ್ಯವೇ ಇಲ್ಲ. ಇಲ್ಲಿ ಈಗ ರಸ್ತೆಗೆ ಮರ ಹಾಗೂ ಕಲ್ಲು ಬಂಡೆಗಳನಿಟ್ಟು ಬದಲಿ ರಸ್ತೆಯಲ್ಲಿ ಕೆಳಗೆ ಇಳಿಯದಂತೆ ಬಂದ್ ಮಾಡಿದ್ದಾರೆ.

ಸುಳ್ಯ ನಗರ ವ್ಯಾಪ್ತಿಯ ಚರಂಡಿಗಳ ಹೂಳು ತೆಗೆಯುವ ಕಾರ್ಯ ಎರಡು ದಿನಗಳಲ್ಲಿ ಆರಂಭವಾಗಲಿದೆ. ಡೆಂಗ್ಯೂ ಹೆಚ್ಚು ಇರುವ ಪ್ರದೇಶಗಳಲ್ಲಿ
ಫಾಂಗಿಗ್ ಮಾಡಲಾಗುತ್ತಿದೆ. ತ್ಯಾಜ್ಯ ನೀರು ರಸ್ತೆ ಮತ್ತು ಚರಂಡಿಗಳಿಗೆ ಬಿಡದಂತೆ ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಕರಪತ್ರಗಳನ್ನು ಮಾಡಿ ಹಂಚಿಕೆ ಮಾಡುತ್ತೇವೆ. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದುವಾರ್ಷಿಕ ಕಾಡು ಕಡಿಯಲು ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗುವುದು ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನ.ಪಂ ಆವರಣದಲ್ಲಿ ಸಂಗ್ರಹಿಸಿದ ಕಸ ವಿಲೇವಾರಿ ಸಧ್ಯದಲ್ಲಿ ಆಗಲಿದೆ. ಬರ್ನಿಂಗ್ ಮೇಷಿನ್‌ಗೆ ಟೆಂಡರ್ ಆಗಿ ಕೊನೆಯ ಹಂತದಲ್ಲಿದೆ.
ವಿನಯ ಕುಮಾರ್ ಕಂದಡ್ಕ, ಅಧ್ಯಕ್ಷರು, ನ.ಪಂ. ಸುಳ್ಯ

ಗ್ರಾಮೀಣ ಪ್ರದೇಶಗಳಿಗೆ ವರವಾದ ಲಾಕ್‌ಡೌನ್
ಕೊರೋನಾ ಎರಡನೇ ಆಲೆಯ ಲಾಕ್‌ಡೌನ್ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ವರವಾಗಿದೆ. ಹಲವು ಪಂಚಾಯಿತಿಗಳಲ್ಲಿ ಯುವಕರ ತಂಡಗಳು ಶ್ರಮದಾನ ಮತ್ತು ಸ್ವಚ್ಚತೆಯಲ್ಲಿ ತೊಡಗಿಕೊಂಡಿದೆ. ಸಂಪಾಜೆ ಸೇರಿದಂತೆ ಹಲವು ಪಂಚಾಯಿತಿಗಳು ಆಡಳಿತದೊಂದಿಗೆ ಯುವಕರ ತಂಡ ಕೈಜೋಡಿಸಿ ಚರಂಡಿಯ ಹೂಳು ತೆಗೆಯುವುದು. ಚರಂಡಿ ಮತ್ತು ರಸ್ತೆಯ ಇಕ್ಕೆಲಗಳ್ಲಿ ಬೆಳೆದುಕೊಂಡಿರುವ ಗಿಡಗಂಟಿಗಳನ್ನು ತೆಗೆಯುವುದು. ವಿದ್ಯುತ್ ಲೈನ್‌ಗಳಿಗೆ ಚಾಚಿಕೊಂಡಿರುವ ಗೆಲ್ಲುಗಳನ್ನು ಕಡಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ.