ಕಷ್ಷ ನುಂಗಿ ಖುಷಿ ಹಂಚುವ ಕಾರ್ಮಿಕರು

ಕೋಲಾರ, ಮೇ ೨: ಸಮಾಜಕ್ಕಾಗಿ ನೌಕರರ ಕೊಡುಗೆಗಳು ಮತ್ತು ತ್ಯಾಗಗಳನ್ನು ಪ್ರತಿ ವರ್ಷ ಮೇ ೧ ರಂದು ಗೌರವಿಸಲಾಗುತ್ತದೆ. ಭಾರತದಲ್ಲಿ ಇದನ್ನು ಮೇ ದಿನ ಎಂದೂ ಕರೆಯುತ್ತಾರೆ. ಕಾರ್ಮಿಕರ ದಿನಾಚರಣೆಯಂದು ಸರ್ಕಾರ ಎಲ್ಲರಿಗೂ ರಾಷ್ಟ್ರೀಯ ರಜೆ ನೀಡಬೇಕು ಎಂದು ನಿರ್ಣಯ ಅಂಗೀಕರಿಸಿತು.
ಹೀಗಾಗಿ ಪ್ರತಿ ವರ್ಷ ಕಾರ್ಮಿಕರ ದಿನಾಚರಣೆಯಂದು ಸರ್ಕಾರಿ ರಜೆಯನ್ನು ನೀಡಲಾಗುತ್ತದೆ. ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮಾನತೆಯ ಸಂಘದ ರಾಜ್ಯಾಧ್ಯಕ್ಷ ವೈ.ಚಂದ್ರಶೇಖರ್ ತಿಳಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಕೂಲಿ ಕಾರ್ಮಿಕರ ಸಮಾನತೆಯ ಸಂಘದಿಂದ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕೋಡಿರಾಮಸಂದ್ರ ಗುರುಸ್ವಾಮಿ, ಜಬರ್‌ದಸ್ತಿ ಮೇಸ್ತಿ ಕೋಲಾರ ಹಾಗೂ ಇಪ್ಪತ್ತು ಮಂದಿ ಕಾರ್ಮಿಕರಿಗೆ ಸನ್ಮಾನ ಮಾಡಿ ಮಾತನಾಡಿದರು.
ಹಗಲು ರಾತ್ರಿ ಎಂದು ನೋಡುವುದಿಲ್ಲ, ಬಿಸಿಲು ಮಳೆ ಗಾಳಿಗೂ ಜಗ್ಗುವುದಿಲ್ಲ, ಕಠಿಣ ಪರಿಶ್ರಮ, ಸಮರ್ಪಣಾ ಭಾವಕ್ಕೆ ಇವರು ಸಾಕ್ಷಿ. ಕಷ್ಟವನ್ನು ನುಂಗಿ ಖುಷಿ ಹಂಚುವವರು ಕಾರ್ಮಿಕರು. ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದು. ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿಯಡಗಿದೆ. ಈ ಶ್ರಮಜೀವಿಗಳೇ ಇಲ್ಲದ ದೇಶವನ್ನು ಊಹಿಸಲು ಸಾಧ್ಯವಿದೆಯೇ? ಖಂಡಿತಾ ಇಲ್ಲ. ತಮ್ಮ ದುಡಿಮೆಯಿಂದಲೇ ತಮ್ಮ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತಾರೆ. ಇಂತಹ ಶ್ರಮಜೀವಿಗಳ ಕೆಲಸವನ್ನು ಗೌರವಿಸುವ, ಇವರ ಶ್ರಮವನ್ನು ಗುರುತಿಸಿ ಇವರ ಕಷಗಳನ್ನು ಸ್ಮರಿಸುವ ಕೆಲಸವಾಗಬೇಕು ಎಂದರು.
ಕರ್ನಾಟಕ ರಾಜ್ಯ ಕಟ್ಟಡ ಕೂಲಿ ಕಾರ್ಮಿಕರ ಸಮಾನತೆಯ ಸಂಘ ರಾಜ್ಯ ಉಪಾಧ್ಯಕ್ಷ ಖಾದ್ರಿಪುರ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.