ಕಷ್ಟ ಬಂದಾಗ ಹೆದರದೆ ಎದುರಿಸಿ : ಬಿ. ಕೆ ರಾಮಕೃಷ್ಣ

ಕಾಳಗಿ. ಏ 19 : ಕೋರೋನಾ ಬಂದಿದೆ, ತರಗತಿ ನಡೆಸುವಂತಿಲ್ಲ, ಶಾಲಾ-ಕಾಲೇಜುಗಳ ಸ್ಥಿತಿ ಕಷ್ಟಕರವಾಗಿದೆ, ಏನು ಮಾಡುವುದಕ್ಕೂ ದಿಕ್ಕು ತೋಚುತ್ತಿಲ್ಲವೆಂದು ಕುಗ್ಗದೆ ಕೋವಿಡ್ ಕಲಿಸಿದ ಅನೇಕ ಸಂಗತಿಗಳನ್ನು ಎದುರಿಗಿಟ್ಟುಕೊಂಡು ಧೈರ್ಯವಾಗಿ ಕಷ್ಟ ಎದುರಿಸಿ ಎಂದು ವಿದ್ಯಾಭಾರತಿ ಕರ್ನಾಟಕ ಪ್ರಾಂತ ಖಜಾಂಚಿ ಬಿ. ಕೆ ರಾಮಕೃಷ್ಣ ಕರೆ ನೀಡಿದರು.
ತಾಲೂಕಿನ ರುದ್ನೂರ್ ತೋಂಟದಾರ್ಯ ಸಿದ್ದೇಶ್ವರ ಮಠದಲ್ಲಿ ವಿದ್ಯಾಭಾರತಿ ಕಲಬುರಗಿ ಜಿಲ್ಲಾ ಘಟಕ ಶನಿವಾರ ಆಯೋಜಿಸಿದ ಜಿಲ್ಲಾ ಸಮೀಕ್ಷಾ ಯೋಜನಾ ಬೈಠಕ್ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಭಾರತಿ ಕಾರ್ಯಚಟುವಟಿಕೆಗಳಲ್ಲಿ ಕಲಬುರ್ಗಿ ಜಿಲ್ಲೆ ರಾಜ್ಯಕ್ಕೆ ಪ್ರೇರಣೆಯಾಗಿದೆ. ಇಲ್ಲಿ ಸಂಘಟನಾತ್ಮಕ ವಿಷಯಗಳು ಮತ್ತು ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಈಗಲೂ ಅವುಗಳು ಮುಂದುವರೆದಿವೆ. ಅವುಗಳನ್ನು ಮೇಲುಕು ಹಾಕುವುದೆ ಈ ಬೈಠಕ್ ನ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಪೂಜ್ಯ ಸದಾಶಿವ ಸ್ವಾಮೀಜಿ ಅವರು ಮುಖ್ಯ ಶಿಕ್ಷಕರು ಕೇವಲ ಬಿಸಿಊಟ ಲೆಕ್ಕಪತ್ರ ಪುಸ್ತಕದ ಕಡೆಗೆ ಹೆಚ್ಚು ಗಮನಹರಿಸದೆ ಶೈಕ್ಷಣಿಕ ಕಲಿಕಾ ಚಟುವಟಿಕೆಗಳ ಪ್ರತಿಯೊಂದು ವಂಶವನ್ನು ಬಲ್ಲವರಾಗಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಕ್ಷೇತ್ರಿಯ ಸಂಸ್ಕೃತಿ ಜ್ಞಾನ ಪರಿಯೋಜನ ಪ್ರಮುಖ ಅಶೋಕ ಪಾಟೀಲ ಚಿಂಚೋಳಿ, ವಿದ್ಯಾಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನವೀರಪ್ಪ ಸಲಗರ ಮಾತನಾಡಿದರು. ಇದೇ ವೇಳೆ ಪೂಜ್ಯ ಸದಾಶಿವ ಸ್ವಾಮೀಜಿಯವರು ‘ ವಿದ್ಯಾನೆಹೀಗ- 2021-22 ಡೈರಿ ಬಿಡುಗಡೆ ಮಾಡಿದರು. ಡೈರಿ ಕುರಿತು ಕ್ಷೇತ್ರಿಯ ಸಹ ಪ್ರಮುಖ ಪಿ. ಭೀಮರೆಡ್ಡಿ ಮಾತಾಡಿದರು.

ವಿದ್ಯಾಭಾರತಿ ಜಿಲ್ಲಾ ಘಟಕದ ಕಾರ್ಯದರ್ಶಿ ಗುಂಡಪ್ಪ ಕರೆಮನೋರ ವರದಿ ಮಂಡಿಸಿ, ಮುಂದಿನ ಯೋಜನೆ ಪ್ರಸ್ತುತ ಪಡಿಸಿದರು. ಕ್ಷೇತ್ರಿಯ ಆರಂಭಿಕ ಶಿಕ್ಷಣ ಪ್ರಮುಖ ಮಹಿಪಾಲರೆಡ್ಡಿ ಪಾಟೀಲ ಸ್ವಾಗತಿಸಿದರು. ಶ್ರೀದೇವಿ ಪಾಟೀಲ ಗೀತೆ ಹಾಡಿದರು. ಕಾಶಿನಾಥ ಮಡಿವಾಳ ನಿರೂಪಿಸಿದರು.