ಕಷ್ಟದ ಜೀವನ ಸನ್ಮಾರ್ಗದ ಪಾಠ ಕಲಿಸುತ್ತದೆ: ರಾಚಮ್ಮ ಪಾಟೀಲ

ಬೀದರ:ಜು.3:ಮನುಷ್ಯರಿಗೆ ಕಷ್ಟಗಳಿರಬೇಕು ಅದು ಜೀವನ ಸನ್ಮಾರ್ಗದ ಪಾಠ ಕಲಿಸುತ್ತದೆ ಎಂದು 90 ವರ್ಷದ ವಯೋವೃದ್ಧ ಸಾಹಿತಿ ರಾಚಮ್ಮ ಮಾಣಿಕರಾವ ಪಾಟೀಲ ನುಡಿದರು
ಅವರು ಬೀದರ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಬಡಾವಣೆಯ ರಾಚಮ್ಮ ಮಾಣಿಕರಾವ ಪಾಟೀಲವರ ಮನೆಯಲ್ಲಿ ಆಯೋಜಿಸಲಾದ 67ನೆಯ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುತ್ತ, ನಾನು ಒಂದು ವರ್ಷದ ಮಗುವಾಗಿರುವಾಗ ತಾಯಿ ತೀರಿಹೋದರು. ಅಪ್ಪನ ಗರಡಿಯಲ್ಲಿ ಚಿಕ್ಕಪ್ಪನ ಮಮತೆಯಲ್ಲಿ ಬೆಳೆದು ಇಂದು ಆರೋಗ್ಯವಂತಲಾಗಿದ್ದೇನೆ. ನಾನು ಕೇವಲ ನಾಲ್ಕನೇ ತರಗತಿ ಓದಿದ್ದೇನೆ. ಗಂಡನ ನೌಕರಿಯಿಂದಾಗಿ ಹಲವು ಕಡೆ ಓಡಾಡುವ ಸಂದರ್ಭದಲ್ಲಿ ಓದು ಮುಗಿಸಲು ಅಸಾಧ್ಯವಾಯಿತು. ಆದರೆ ನನ್ನ ನಿರಂತರವಾದ ಕಲಿಕೆಯಲ್ಲಿ ಹಿಂದೆ ಬಿಳದೆ ಉರ್ದು, ತೆಲುಗು, ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಹೀಗೆ ಬಹುಭಾಷೆಗಳನ್ನು ಕರಗತ ಮಾಡಿಕೊಂಡಿದ್ದೇನೆ. ಎಷ್ಟೇ ಭಾಷೆ ಬಂದರೂ ಕನ್ನಡದ ಕಾಳಜಿ ನನಗೆ ಬಿಟ್ಟಿಲ್ಲ. ದ.ರಾ. ಬೇಂದ್ರ, ಜಿ.ಎಸ್. ಶಿವರುದ್ರಪ್ಪ, ಕುವೆಂಪು ಅವರ ಸಾಹಿತ್ಯದಿಂದ ಪ್ರಾಭಾವಿತಳಾಗಿ ಬಾಲ್ಯದಲ್ಲಿಯೇ ಕನ್ನಡದ ಅಭಿವೃದ್ಧಿ ಮಾಡಲು ಪಣತೊಟ್ಟಿದ್ದಲ್ಲದೆ ಕರ್ನಾಟಕದ ಏಕೀಕರಣ ಕಾಲಕ್ಕೆ ಹೋರಾಟ ಮಾಡಲು ಮನಸ್ಸು ಮಾಡಿ, ಕೆಲವು ಕಡೆ ಹೋಗಿದ್ದೆ.

ನನ್ನ ಗಂಡ ತಹಸೀಲ್ದಾರ್, ಅಪರ ಜಿಲ್ಲಾಧಿಕಾರಿಗಳಿದ್ದಾಗ, ಲಂಚ ಸ್ವೀಕರಿಸಬೇಡವೆಂದು ತಾಕೀತು ಮಾಡಿದ್ದೇನೆ. ಏಕೆಂದರೆ ನಾನು ಹುಟ್ಟುವಾಗ ಬಾಯಿಯಲ್ಲಿ ಬಂಗಾರದ ಚಮಚ ಇಟ್ಟುಕೊಂಡೆ ಹುಟ್ಟಿದ್ದೇನೆ. ಹೀಗಾಗಿ ಯಾವುದೇ ಉಚಿತ ಆಸ್ತಿ ಅಂತಸ್ಥಿನ ಗಳಿಕೆಯ ಗೋಜಿಗೆ ನಾವು ಹೋಗಲ್ಲ. ನನ್ನ ಗಂಡ ಅನೇಕ ಸಾಮಾಜಿಕ, ಅಭಿವೃದ್ಧಿ ಪರ ಕೆಲಸ ಮಾಡಿ ತದನಂತರದ ಒಬ್ಬ ಆದರ್ಶ ರೈತನಾಗಿ 78 ನೇ ವಯಸ್ಸಿನಲ್ಲಿ ನನ್ನನ್ನು ಬಿಟ್ಟು ಹೋಗಿದ್ದು ನೋವಿನ ಸಂಗತಿ. ಅಂದಿನ ಕಾಲದಲ್ಲಿ ಕಂದಾಯ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರು ನಾವು ಯಾವುದೇ ಜಾತಿ, ಮತ, ಪಂಥ ಯಾವುದೇ ಭೇದಭಾವ ಮಾಡಲಿಲ್ಲ. ಏಕೆಂದರೆ ನಮಗೆ ಬಸವಣ್ಣನವರ ತತ್ವಾದರ್ಶದ ಸಂಸಾರ ನಮ್ಮದಾಗಿತ್ತು ಎಂದು ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡರು.

ಭಾಲ್ಕಿಯ ಚನ್ನಬಸವೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ವಿಜಯಲಕ್ಷ್ಮಿ ಗಡ್ಡೆ ಅವರು ಸಮಾರಂಭವನ್ನು ಉದ್ಘಾಟಿಸಿ – ಮಾತನಾಡುತ್ತ ಶರಣರ ಬದುಕು ನಡೆ-ನುಡಿ ಒಂದಾಗಿಸಿಕೊಂಡು ಜಾತಿ, ವರ್ಗ, ವರ್ಣ ಹಾಗೂ ಲಿಂಗಭೇದವಿಲ್ಲದ ಪರಿಪೂರ್ಣ ರೀತಿಯ ಸಮಸಮಾಜ ಕಟ್ಟಿದರು. ಆದರೆ ಅವರನ್ನು ಪಶುವಾಗಿಸುವ ಹುನ್ನಾರ ನಡೆದಿದೆ. ಬಸವಣ್ಣನೆಂದರೆ ಸಾಂಸ್ಕøತಿಕ ಶಕ್ತಿ ಎತ್ತು, ನಂದಿಯಲ್ಲ ಅದು ಪಟ್ಟಭದ್ರ ಹಿತಾಸಕ್ತಿಗಳ ಸಂಚು ಎಂದು ಹೇಳುತ್ತ ರಾಚಮ್ಮ ಪಾಟೀಲ ಮಹಿಳಾ ಸಮಾಜಕ್ಕೆ ಒಂದು ಮಾದರಿ. ತಮ್ಮ ಇಳಿ ವಯಸ್ಸಿನಲ್ಲಿಯೂ ಕನ್ನಡದ ಅಭಿಮಾನ, ಉತ್ಸುಕತೆ ನೋಡಿ ನಾವು ಬೆರಗಾಗಿದ್ದೇವೆ. ಅವರು ಉರ್ದು, ತೆಲುಗು, ಹಿಂದಿ, ಇಂಗ್ಲೀಷ್ ಮತ್ತು ಕನ್ನಡ ಐದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಿ ತಮ್ಮ ವೈಚಾರಿಕತೆ ನಿಲುವಿನ ಆದರ್ಶ ತಾಯಿ. ತನ್ನ ಮಕ್ಕಳನ್ನು, ಮೊಮ್ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ, ಸಾಹಿತ್ಯದ ಕ್ಷೇತ್ರದಲ್ಲಿ ದಾಪುಗಾಲು ಹಾಕಲು ಪ್ರೇರಣ ಶಕ್ತಿ ನೀಡಿರುವ ಪ್ರಯುಕ್ತ ಇಂದು ರೂಪಾ ಪಾಟೀಲ ಕವಿಯಾಗಿ ಹೊರಹೊಮ್ಮಿರುವುದು ಸಾಕ್ಷಿಯಾಗಿದೆ ಎಂದು ನುಡಿದರು.

ಸಂವಾದಕರಾಗಿ ಆಗಮಿಸಿದ ಸಾಹಿತ್ಯಗಳಾದ ಶ್ರೀದೇವಿ ಪಾಟೀಲ ಹಾಗೂ ವಿಜಯಕುಮಾರ ಗೌರೆಯವರು ನಡೆಸಿಕೊಟ್ಟ ಸಂವಾದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ಮಾನವ ವಿಶ್ವ ಮಾನವವಾಗಬೇಕಾದರೆ, ಕನ್ನಡ ಅಗ್ರಗಣ್ಯ ಭಾಷೆಯಾಗಿ ಅದನ್ನು ಅನುಷ್ಠಾನಗೊಳ್ಳಬೇಕು. ಓ ನನ್ನ ಚೇತನ ಆಗು ನೀ ಅನಿಕೇತನ ಹಾಡು ಹಾಡಿ ಎಲ್ಲರ ಮನ ಸೂರೆಗೊಳಿಸಿದ್ದರು. 16 ಜನ ಮರಿಮೊಮ್ಮಕ್ಕಳಿದ್ದು ನನಗೆ ತಾಯಿಯ ಮಮತೆ, ಆ ವಾತ್ಸಲ್ಯ ಸಿಗದಿದ್ದರೂ ರೂಪಾ ಪಾಟೀಲ ನನ್ನನ್ನು ಆರೈಕೆ ಮಾಡಿ ತಾಯಿಯ ವಾತ್ಸಲ್ಯ ಇಂದಿಗೂ ನನಗೆ ನೆನಪಾಗುವಂತೆ ಮಾಡುತ್ತಿದ್ದಾಳೆ. ಅವಳ ಸೇವೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿರುವ ಗೌರವ ಮರೆಯಲು ಅಸಾಧ್ಯವೆಂದು ಕಣ್ತುಂಬ ನೀರು ತಂದು ಮಾತು ಮುಗಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಆಶೆಯ ಮಾತನಾಡಿ ರಾಚಮ್ಮ ಮಾಣಿಕರಾವ ಪಾಟೀಲ ಹಾಲಹಳ್ಳಿ ಗ್ರಾಮದವರಾಗಿದ್ದು, ಅತಿ ಕನ್ನಡದ ಬಾಂಧವ್ಯಯುಳ್ಳ ತಾಯಿ ಕ.ಸಾ.ಪ. ಆಯೋಜಿಸುವ ಕಾವ, ಜಾಣ, ರತ್ನ ಪರೀಕ್ಷೆ ಬರೆದು ಅಗ್ರಗಣ್ಯ ಕನ್ನಡ ಪದವಿ ಪಡೆದ ತಾಯಿ. ತಮ್ಮ ಇಡೀ ಜೀವನದಲ್ಲಿ ಬಸವತತ್ವ, ಕನ್ನಡತ್ವ ಹಾಸು ಹೊಕ್ಕಾಗಿಸಿಕೊಂಡು ಇಂದು ಸಹ ಅಕ್ಕ ಅಲ್ಲಮರ ವಚನ ಸುಲಲೀತವಾಗಿ ಮಾತನಾಡುವುದು ನಾವಿಂದು ಕಂಡಿದ್ದೇವೆ. ಇವರ ಮನೆಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ನಮಗೊಂದು ಹೆಮ್ಮೆಯಸಂಗತಿ ಎಂದು ನುಡಿದರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಎಮ್.ಎಸ್. ಮನೋಹರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಟಿ. ಎಂ. ಮಚ್ಚೆ ಡಾ. ಶ್ರೇಯಾ ಮಹೇಂದ್ರಕರ, ವಿದ್ಯಾವತಿ ಬಲ್ಲೂರ, ಸ್ವರೂಪರಾಣಿ ನಾಗೂರೆ, ಸಕಲೇಶ್ವರಿ ಚನಶೆಟ್ಟಿ, ರಾಮಕೃಷ್ಣ ಸಾಳೆ, ವೀರಭದ್ರ ಉಪ್ಪಿನ್, ಮೊದಲಾದ ಸಾಹಿತಿಗಳು, ಕಲಾವಿದರು ಪಾಲ್ಗೊಂಡು ಹಿರಿಯ ಜೀವಿಯ ಮಾತು ಕತೆ ಆಲಿಸಿ ವಿಶ್ಮಯಗೊಂಡರು.

ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷರಾದ ರೂಪಾ ಎಸ್. ಜಗದೀಶ ಪಾಟೀಲ ಸ್ವಾಗತಿಸಿದರೆ ಪ್ರೊ. ಜಗನ್ನಾಥ ಕಮಲಾಪೂರೆ ನಿರೂಪಿಸಿದರು. ಶಿವಶಂಕರ ಟೋಕರೆ ವಂದಿಸಿದರು.