ಕಷ್ಟದಲ್ಲಿರುವವರಿಗೆ ನೆರವು ನೀಡುವುದು ತುಂಬಾ ಮುಖ್ಯ

ಶಿವಮೊಗ್ಗ.ಏ.೧೨; ಸಮಾಜದಲ್ಲಿ ಅನೇಕ ಸೇವಾ ಸಂಸ್ಥೆಗಳಿದ್ದು, ಅತ್ಯಂತ ಕಷ್ಟದಲ್ಲಿ ಜೀವನ ನಡೆಸುತ್ತಿರುವ, ಅಗತ್ಯ ಇರುವವರಿಗೆ ನೆರವು ನೀಡುವುದು ತುಂಬಾ ಮುಖ್ಯ ಎಂದು ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಹೇಳಿದರು.ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ವತಿಯಿಂದ ಆರೈಕೆ ಕೇಂದ್ರದ ಅನ್ನಪೂರ್ಣೇಶ್ವರಿ ಪ್ರಸಾದ ಯೋಜನೆಗೆ ಆರ್ಥಿಕ ನೆರವು ಹಾಗೂ ಆಹಾರ ಸಾಮಾಗ್ರಿ ನೀಡಿ ಮಾತನಾಡಿ, ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ವೃದ್ಧರ, ಪಾರ್ಶ್ವವಾಯು ಪೀಡಿತರ, ಬುದ್ದಿಮಾಂದ್ಯರ ಸೇವೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ತುಂಬಾ ಕಷ್ಟಕರ ಆಗಿರುವ ಪರಿಸ್ಥಿತಿಯಲ್ಲಿ ಸೇವಾ ಮನೋಭಾವದಿಂದ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.ಪಂಚಾಕ್ಷರಿ ಹಿರೇಮಠ ಅವರು 70ನೇ ವಯಸ್ಸಿನಲ್ಲಿಯೂ ಸ್ವಾರ್ಥರಹಿತ ಸೇವೆ ಮಾಡುತ್ತಿರುವುದು ಮನುಕುಲಕ್ಕೆ ಮಾದರಿಯಾಗಿದೆ. ಇಂತಹ ಸೇವಾ ಮನೋಭಾವ ಹೊಂದಿರುವ ಸಂಸ್ಥೆಗಳಿಗೆ ಸಾರ್ವಜನಿಕರು ಹೆಚ್ಚು ಭೇಟಿ ನೀಡಿ ನೆರವು ನೀಡಬೇಕು ಎಂದರು.ಇಂದಿನ ಯುಗದಲ್ಲಿ ಮನೆಯಲ್ಲಿ ಇರುವ ಹಿರಿಯರನ್ನು ನೋಡಿಕೊಳ್ಳುವುದು ಕಷ್ಟ ಎಂದು ಭಾವಿಸುವ ಜನರೇ ಜಾಸ್ತಿ. ಇಲ್ಲಿ ಮಾನಸಿಕವಾಗಿ ನೊಂದವರನ್ನು, ಕಷ್ಟದಲ್ಲಿರುವ ಹಿರಿಯರನ್ನು ಪ್ರೀತಿ ಹಾಗೂ ಗೌರವದಿಂದ ನೋಡಿಕೊಳ್ಳುತ್ತಿರುವುದು ಉತ್ತಮ ಸೇವೆ ಎಂದು ಹೇಳಿದರು.ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ ಐತಾಳ್ ಮಾತನಾಡಿ, ಶಿವಮೊಗ್ಗದ ನಾಗರೀಕರ ಸಹಕಾರದಿಂದ ಸಂಸ್ಥೆ ಉತ್ತಮವಾಗಿ ನಡೆಯುತ್ತಿದೆ ಎಂದರು. ನಿರ್ದೇಶಕ ಜಿ.ವಿಜಯ್‌ಕುಮಾರ್ ಮಾತನಾಡಿ, ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಜನರು ಹೆಚ್ಚಿನ ನೆರವು ನೀಡಬೇಕು ಎಂದು ತಿಳಿಸಿದರು.ಆರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ, ರೋಟರಿ ಉತ್ತರ ಮಾಜಿ ಅಧ್ಯಕ್ಷ ಜೆ.ಶರವಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.