ಕಷ್ಟಗಳನ್ನು ಸ್ವೀಕರಿಸಿ ಎದುರಿಸಿ : ಬಳಿಗಾರ

ಬಾದಾಮಿ, ನ9: ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನು ಸಮಾಧಾನದಿಂದ ಸ್ವೀಕರಿಸಿ ಅವುಗಳನ್ನು ಎದುರಿಸಿ ಸುಧಾರಿಸಿ ನಡೆಯಬೇಕು ಎಂದು ಇಲಕಲ್ ನಗರದ ಪ್ರಸಿದ್ದ ಜಾನಪದ ಸಾಹಿತಿ ಡಾ. ಶಂಭು ಬಳಿಗಾರ ಹೇಳಿದರು.
ಇಲ್ಲಿಯ ಅಕ್ಕಮಹಾದೇವಿ ಅನುಭಾವ ಮಂಟಪದ ಆವರಣದಲ್ಲಿ ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ ಶಾಖಾಮಠ ಸೇವಾ ಬಳಗದವತಿಯಿಂದ ಹಮ್ಮಿಕೊಂಡಿದ್ದ `ಮತ್ತ ನೆನಪಾಗ್ಯಾನ ತೊಗರಿ ತಿಪ್ಪಾ’ ಉಪನ್ಯಾಸದಲ್ಲಿ ಮಾತನಾಡಿದರು.
ಕೊರೊನಾ ಸಂಕಷ್ಟದಲ್ಲೂ ನಾವೆಲ್ಲರೂ ಇಂದೂ ಕೂಡ ಆರೋಗ್ಯದಿಂದ ಇರುವುದು ಎಲ್ಲರ ಭಾಗ್ಯ. ಸಂಸ್ಕಾರ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಸಂಸ್ಕಾರದಿಂದ ಭವಿಷ್ಯದಲ್ಲಿ ಮಕ್ಕಳು ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದರು.
ಅವಿಭಕ್ತ ಕುಟುಂಬದ ಪರಿಕಲ್ಪನೆ ಇಲ್ಲದಾಗಿದೆ. ಕುಟುಂಬ ಗಂಡ, ಹೆಂಡತಿ ಮಕ್ಕಳು ಮಾತ್ರ ಅಲ್ಲ. ಎಲ್ಲರೂ ಕೂಡಿ ಸಂಬಂಧಗಳು ಉಳಿಯುವಂತೆ ತಿಳಿಹೇಳಿ ಅವಿಭಕ್ತ ಕುಟುಂಬಗಳು ನಿರ್ಮಾಣ ಮಾಡುವಂತಾಗಬೇಕು ಎಂದರು.
ಜಾನಪದ ಹಾಸ್ಯ ತೊಗರಿ ತಿಪ್ಪನ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಇದೇ ಸಂದರ್ಭದಲ್ಲಿ ಜಾನಪದ ಸಾಹಿತಿ ಶಂಭು ಬಳಿಗಾರ ಇವರನ್ನು ಶಿವಯೋಗಮಂದಿರ ಶಾಖಾಮಠದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಇಷ್ಟಲಿಂಗ ಶಿರಶಿ ಸ್ವಾಗತಿಸಿದರು. ಉಜ್ವಲ ಬಸರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.