ಕಷಾಯ ಮಾಡುವ ವಿಧಾನ:

ಎಲ್ಲರನ್ನೂ ಕಾಡುವ ಸಣ್ಣ ನೆಗಡಿ, ಕೆಮ್ಮು, ಗಂಟಲು ನೋವಿಗೆ ಮನೆ ಮಂದಿಯೆಲ್ಲಾ ದಿನ ಎರಡು ಬಾರಿ ಕುಡಿಯಬಹುದಾದ ಆರೋಗ್ಯಕರ, ರುಚಿಕರ ಪೇಯ. ಚಿಕ್ಕ ಮಕ್ಕಳಿಗೂ ಕೊಡಬಹುದು.
ಬೇಕಾಗುವ ಸಾಮಗ್ರಿಗಳು:
ಧನಿಯಾ – 4 ಟೇಬಲ್ ಚಮಚ
ಜೀರಿಗೆ – 2 ಟೇಬಲ್ ಚಮಚ
ಸೋಂಪು – 1 ಟೇಬಲ್ ಚಮಚ
ಕರಿ ಮೆಣಸು – 1 ಟೇಬಲ್ ಚಮಚ
ಮೆಂತ್ಯ – 1 ಟೇಬಲ್ ಚಮಚ
ಅರಿಶಿನ ಪುಡಿ – 1 ಟೇಬಲ್ ಚಮಚ
ಒಣ ಶುಂಠಿ ಪುಡಿ – 1 ಟೇಬಲ್ ಚಮಚ
ಅತಿ ಮಧುರ ಪುಡಿ – 1 ಟೇಬಲ್ ಚಮಚ
ಚಕ್ಕೆ – ಎರಡು ಇಂಚು
ಏಲಕ್ಕಿ – 10
ಲವಂಗ – 8
ಜಾಕಾಯಿ – ಅರ್ಧ ( ತುರಿದದ್ದು )
ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಮೂರು ಪುಡಿಗಳನ್ನು ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆ ಹುರಿದು ತಣ್ಣಗಾದ ಮೇಲೆ ಪುಡಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಬೇಕಾದಾಗ ಉಪಯೋಗಿಸಬಹುದು.
ಕಷಾಯ ಮಾಡುವ ವಿಧಾನ:
ಒಂದು ಲೋಟ ( 100 ಮಿ. ಲೀ. ) ನೀರಿಗೆ ಒಂದು ಟೀ ಚಮಚ ಪುಡಿ ಹಾಕಿ ಕುದಿಯಲು ಇಡಿ. ನೀರು ಕುದಿದು ಅರ್ಧ ಆದಾಗ ಅರ್ಧ ಲೋಟ ಹಾಲು ಸೇರಿಸಿ ಕುದಿಸಿ ಕೊನೆಯಲ್ಲಿ ಸಕ್ಕರೆ ಅಥವಾ ಕಲ್ಲು ಸಕ್ಕರೆ ಸೇರಿಸಿ ಬಿಸಿ ಬಿಸಿಯಾಗಿ ಸವಿಯಿರಿ. ನಿಮಗೆ ಕಷಾಯ ಹೆಚ್ಚು ಗಾಢ ಬೇಕು ಅನ್ನಿಸಿದರೆ ಕಷಾಯದ ಪುಡಿ ತುಸು ಹೆಚ್ಚಿಗೆ ಹಾಕಬಹುದು.
ಬೆಲ್ಲ ಅಥವಾ ಜೇನು ತುಪ್ಪ ಹಾಕುವುದಾದರೆ ಒಲೆಯಿಂದ ಇಳಿಸಿ ಬೆಲ್ಲ ಸೇರಿಸಿ ಕಲೆಸಿ ಕುಡಿಯಬಹದು. ಈ ಅಳತೆಯಲ್ಲಿ ಮಾಡಿದ ಕಷಾಯ ಒಬ್ಬರಿಗೆ ಸಾಕಾಗುವುದು.
ಈ ಕಷಾಯ ಹಾಲು ಸೇರಿಸದೆ ಕುಡಿದರೆ ಉಷ್ಣ ಆಗಬಹುದು. ಹಾಗಾಗಿ ಹಾಲು ಸೇರಿಸಿ ಕುಡಿಯಬೇಕು.