ಕವಿ ನಾಗಚಂದ್ರ 11ನೇ ಶತಮಾನದ ಜೈನಕವಿಯಾಗಿದ್ದು ಮಲ್ಲಿನಾಥ ಪುರಾಣ, ರಾಮಾಯಣ ಹಾಗೂ ಮತ್ತಿತರ ಕೃತಿಗಳ ರಚನೆಃ ಯತ್ನಾಳ

ವಿಜಯಪುರ, ನ.9-ಕವಿ ನಾಗಚಂದ್ರ 11ನೇ ಶತಮಾನದ ಜೈನಕವಿಯಾಗಿದ್ದು ಮಲ್ಲಿನಾಥ ಪುರಾಣ, ರಾಮಾಯಣ ಹಾಗೂ ಮತ್ತಿತರ ಕೃತಿಗಳನ್ನು ರಚಿಸಿದ್ದು ನಮ್ಮ ವಿಜಯಪುರ ಜಿಲ್ಲೆಯ ಹೆಮ್ಮೆಯ ಕವಿಯಾಗಿದ್ದಾನೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ್ (ಯತ್ನಾಳ) ಹೇಳಿದರು.
ಅವರು ಇಂದು ರವಿವಾರ ಜೈನ ಅಸೋಸಿಯೇಷನ್, ಕವಿ ನಾಗಚಂದ್ರ ಪ್ರತಿಷ್ಠಾನ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಗಚಂದ್ರ ರಸ್ತೆಯ ನಾಮಫಲಕ ಅನಾವರಣ ಮಾಡಿ ಮಾತನಾಡಿ 2016ರಲ್ಲಿಯೆ ಅಂದು ಎಲ್ಲರ ಸೂಚನೆ ಹಾಗೂ ಅನುಮೋದನೆಯ ಮೇರೆಗೆ ಮಹಾನಗರ ಪಾಲಿಕೆಯಲ್ಲಿ ಸರ್ವಸದಸ್ಯರ ಸರ್ವಾನುಮತದಿಂದ ಜಿಲ್ಲಾಧಿಕಾರಿಗಳ ನಿವಾಸದಿಂದ (ಅಂಬೇಡ್ಕರ ಸರ್ಕಲ್) ಮಲ್ಲಿನಾಥನ ಬಸದಿ (ಕಣಕಿ ಬಜಾರವರೆಗೆ) ಯವರೆಗೆ ಹೋಗುವ ರಸ್ತೆಯನ್ನು ಅಭಿನವಪಂಪ ಕವಿ ನಾಗಚಂದ್ರ ಮಾರ್ಗ ಎಂದೇ ಹೆಸರಿಸಿತ್ತು. ಈ ನಿಮಿತ್ಯ ಇಂದು ಅದರ ನಾಮಕರಣ ಫಲಕವನ್ನು ಅನಾವರಣ ಮಾಡಲು ನನಗೆ ಅತ್ಯಂತ ಸಂತೋಷವೆನಿಸುತ್ತದೆ ಎಂದರು.
ಇತಿಹಾಸ ಉಪನ್ಯಾಸಕ ಡಾ. ಆನಂದ ಕುಲಕರ್ಣಿ ಮಾತನಾಡಿ, 2016ರಲ್ಲಿ ತೆಗೆದುಕೊಂಡ ಈ ನಿರ್ಣಯವು ಅನುಷ್ಠಾನಕ್ಕೆ ಬರುವುದು ತಡವಾಯಿತು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಹಾಗೂ ನಮ್ಮೆಲ್ಲರ ಶ್ರಮ ಇಂದು ಸಾರ್ಥಕಗೊಂಡಿದೆ. ಮುಂದಿನ ದಿನಗಳಲ್ಲಿ ಕವಿ ನಾಗಚಂದ್ರನ ಕುರಿತಂತೆ ವಿವಿಧ ಯೋಜನೆ ಮತ್ತು ರೂಪುರೇಶೆಗಳನ್ನು ಜೈನ ಸಮಾಜ, ಸಾಹಿತ್ಯಾಸಕ್ತರು ಹಾಗೂ ನಾಗಚಂದ್ರನ ಅಭಿಮಾನಿಗಳ ಸಹಕಾರದೊಂದಿಗೆ ಜಾರಿಗೆ ತರಲು ಸಂಪೂರ್ಣ ಪ್ರಯತ್ನವನ್ನು ಮಾಡಲಾಗುವುದು ಎಂದು ನುಡಿದರು.
ನಾಮಫಲಕ ಅನಾವರಣ ಸಮಾರಂಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ನಾಗಚಂದ್ರ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಅಪ್ಪಾಸಾಹೇಬ ಮುತ್ತಿನ, ಕರ್ನಾಟಕ ಜೈನ ಅಸೋಸಿಯೇಷನ್‍ನ ನಿರ್ದೇಶಕರಾದ ಪ್ರವೀಣ ಕಾಸರ, ಜೈನ ಸಮಾಜದ ಜಿಲ್ಲಾಧ್ಯಕ್ಷರಾದ ಜೆ.ಕೆ. ಅಲದಿ, ಕಾರ್ಯದರ್ಶಿ ಸಾತಪ್ಪ ಗೊಂಗಡಿ, ಮುಖಂಡರಾದ ಶೀತಲಕುಮಾರ ಓಗಿ, ಜಗದೀಶ ಗಲಗಲಿ, ಭರತ ಧನಶೆಟ್ಟಿ, ವಿಜಯಕುಮಾರ ದುರ್ಗಣ್ಣವರ, ಎಸ್.ಎಸ್. ಮಗದುಮ್, ಎಸ್.ಪಿ.ಜೈನ, ಸಂಜೀವ ಬಾಗೇವಾಡಿ, ಮಹಾವೀರ ತಂಗಾ, ಅನೀಲಕುಮಾರ ಬಾಗೇವಾಡಿ, ಮನು ಪತ್ತಾರ, ಛಾಯಾ ಮಸಿಯವರ, ಸುಮಂಗಲಾ ಕೋಟಿ ಹಾಗೂ ಜೈನ ಪರಿವಾರದ ಸಮಸ್ತ ಬಂಧುಗಳು, ವಿವಿಧ ಸಮಾಜದ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ನಾಗಚಂದ್ರನ ಅಭಿಮಾನಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ರಾಜೇಂದ್ರಕುಮಾರ್ ಬಿರಾದಾರ್ ಸ್ವಾಗತಿಸಿ ವಂದಿಸಿದರು.