ಕವಿಸಂ 133ನೇ ಸಂಸ್ಥಾಪನಾ ದಿನಾಚರಣೆ

ಧಾರವಾಡ,ಜು21: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಒಂದು ವಾರ ಕಾಲ ನಡೆಯುವ ಕವಿಸಂ 133ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ, ಕನ್ನಡಕ್ಕೆ ತನ್ನನ್ನೇ ಸಮರ್ಪಿಸಿಕೊಂಡ ಏಕೈಕ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘ. ಇದು ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಗೆ ಶಕ್ತಿ ತುಂಬಿತು. ನಾಡು-ನುಡಿಗೆ ಸಲ್ಲಿಸಿದ ಸೇವೆ ಅನುಪಮ. ಈ ಸಂಸ್ಥೆಗೆ ಅನೇಕ ಮಹನೀಯರು ಸಂಘಕ್ಕೆ ಶಕ್ತಿ ತುಂಬಲು ಶ್ರಮಿಸಿದ ಕಾರ್ಯ ಅನನ್ಯ ಎಂದರು.
ಕರ್ನಾಟಕದಲ್ಲಿ ಬೇರೆ ಭಾಷಗಳ ಒತ್ತಡ ಮತ್ತು ದಬ್ಬಾಳಿಕೆಯಿಂದ ಕನ್ನಡಿಗರೇ ಅನ್ಯರಾಗಿದ್ದರು. ಇದಕ್ಕೆ ಇತಿಶ್ರೀ ಹಾಡಲು ಕರ್ನಾಟಕ ವಿದ್ಯಾವರ್ಧಕ ಸಂಘ ಜನ್ಮ ತಾಳಿತು. ಸಂಸ್ಥೆ ಸಾಕಷ್ಟು ಸಂಕಷ್ಟಗಳ ಮಧ್ಯೆ ಸಂಸ್ಥೆ ಉಳಿದು, ಬೆಳೆದು ಬಂದಿದೆ. ಸಂಘ ಮತ್ತಷ್ಟು ಶ್ರೀಮಂತಗೊಳಿಸಲು ಕರೆ ನೀಡಿದರು.
ಸಾನಿಧ್ಯ ವಹಿಸಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಅನ್ಯ ರಾಜ್ಯಗಳು ಹಾಗೂ ವಿದೇಶಗಳಲ್ಲಿರುವ ಕನ್ನಡಿಗರಿಗೆ ಕನ್ನಡದ ಬಗ್ಗೆ ತೀವ್ರ ಆಸಕ್ತಿಯಿದೆ. ಆದರೆ ಇಲ್ಲಿನ ಕನ್ನಡಿಗರಿಗೆ ಕನ್ನಡ ಉಳಿಸುವ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದು ನೋವಿನ ಸಂಗತಿ. ಎಷ್ಟೇ ಭಾಷೆಗಳನ್ನು ಕಲಿತರೂ ಮಾತೃಭಾಷೆಯನ್ನು ಮೂಲವಾಗಿಟ್ಟುಕೊಂಡು ವಿದ್ಯೆ ಕಲಿತರೆ ಖಂಡಿತವಾಗಿಯೂ ಶ್ರೇಯಸ್ಸು ಸಿಗಲಿದೆ ಎಂದರು.
ಡಾ. ಸಂಜೀವ ಕುಲಕರ್ಣಿ ರಾ.ಹ. ದೇಶಪಾಂಡೆ ಅವರ ಜೀವನ ಸಾಧನೆ ಕುರಿತು ಮಾತನಾಡಿ, “ಸಿರಿಗನ್ನಡಂ ಗೆಲ್ಗೆ’ ಎಂಬ ಧ್ಯೇಯ ವಾಕ್ಯವನ್ನು ಕನ್ನಡ ನಾಡಿಗೆ ನೀಡಿದ ಮಹಾನ್ ವ್ಯಕ್ತಿ ರಾ.ಹ. ದೇಶಪಾಂಡೆ ಚಿರಸ್ಮರಣೀಯರು. ಜನರಲ್ಲಿ ಭಾಷೆ ಬಗ್ಗೆ ಅಭಿಮಾನ ಬರಬೇಕು. ಕನ್ನಡಿಗರು ಬಹಳ ಉದಾರಿ ಹಾಗೂ ಔದಾರ್ಯ ಉಳ್ಳವರು. ಅನ್ಯ ಭಾಷಿಕರಿಗೆ ಬಹುಬೇಗ ಒಡನಾಡಿಗಳಾಗಿ ಬಿಡುತ್ತೇವೆ ಎಂದ ಅವರು, ಕರ್ನಾಟಕದಲ್ಲಿ ಕನ್ನಡ ಸಂಸ್ಕøತಿ ಉಳಿಸಿದ ಕೀರ್ತಿ ಧಾರವಾಡ ವಿದ್ಯಾವರ್ಧಕ ಸಂಘಕ್ಕೆ ಸಲ್ಲುತ್ತದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ವಿದೇಶಿ ಭಾಷೆಗಳ ಹಾವಳಿಯ ಹಿನ್ನಲೆಯಲ್ಲಿ ದೇಶಿಯ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುವ ದುಸ್ಥಿತಿ ಬಂದಿದೆ. ಇದಕ್ಕೆ ಕನ್ನಡ ಭಾಷೆ ಹೊರತಲ್ಲ. ಹೀಗಾಗಿ ಭಾಷೆ ಉಳಿಸುವಲ್ಲಿ ವಿದ್ಯಾವರ್ಧಕ ಸಂಘದ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹಲವು ಕಾರ್ಯಯೋಜನೆ ರೂಪಿಸಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ವಿದ್ವಾಂಸ ಡಾ. ಗುರುಲಿಂಗ ಕಾಪಸೆ ಮಾತನಾಡಿ, ನನಗೆ ಶಾಲೆ, ಕಲಿಕೆ ಹಾಗೂ ಕಲಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಈ ನಡೆಗಳೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದವು. ಗುರುದೇವ ರಾನಡೆ, ದ.ರಾ.ಬೇಂದ್ರ ಪ್ರಭಾವ ಸಾಹಿತ್ಯದ ಒಲವು ಬೆಳಿಸಿದರೆ, ಅರವಿಂದರ ಸಾಹಿತ್ಯ ಆಧ್ಯಾತ್ಮಿಕ ಒಲವು ಬೆಳೆಸಿತು ಎಂದರು. ಕನ್ನಡ ಅಳಿವು ಉಳಿವಿನ ಸಂದರ್ಭ ಎದುರಾಗಿದ್ದು, ಕನ್ನಡ ಉಳಿಸಲು ಎಲ್ಲ ಕನ್ನಡಿಗರು ಒಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ಡಾ. ಗುರುಲಿಂಗ ಕಾಪಸೆ ಅವರ ಸಾಹಿತ್ಯದ ವಿವಿಧ ಮಜಲುಗಳನ್ನು ವಿವರಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡಿದರು. ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ ಇದ್ದರು.