ಕವಿವ ಸಂಘದ ಕಾರ್ಯ ಅವಿಸ್ಮರಣೀಯ

ಧಾರವಾಡ ನ.4- ಕನ್ನಡಕ್ಕೆ ಕುತ್ತು ಬಂದಾಗ ಹಾಗೂ ಕನ್ನಡದ ನೆಲದಲ್ಲಿಯೇ ಕನ್ನಡಿಗರಿಗೆ ಅನಾಥ ಪ್ರಜ್ಞೆ ಬಂದೊದಗಿದ ಸಂದರ್ಭದಲ್ಲಿ ಕನ್ನಡಿಗರನ್ನು ಒಗ್ಗೂಡಿಸಲು, ಕನ್ನಡ ಕಟ್ಟಲು ಒಂದು ಶಕ್ತಿಯಾಗಿ, ವೇದಿಕೆಯಾಗಿ ಕನ್ನಡದ ಮೊಟ್ಟಮೊದಲ ಎಂ.ಎ. ಪದವಿಧರರಾದ, ಕನ್ನಡದ ಕಟ್ಟಾಳು ರಾ.ಹ. ದೇಶಪಾಂಡೆಯವರ ನೇತೃತ್ವದಲ್ಲಿ 1890 ರಲ್ಲಿ ರೂಪಗೊಂಡದ್ದೆ ಕರ್ನಾಟಕ ವಿದ್ಯಾವರ್ಧಕ ಸಂಘ ಎಂದು ಹಿರೇಮಲ್ಲೂರ ಈಶ್ವರನ ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಡಾ. ಶಶಿಧರ ತೋಡ್ಕರ ಹೇಳಿದರು.
ಸಂಘವು ಆಯೋಜಿಸಿದ್ದ 65 ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಂಘವು ರೂಪಗೊಂಡು, ಕನ್ನಡ, ಕನ್ನಡಿಗ, ಕರ್ನಾಟಕತ್ವದ ಅಸ್ಮಿತೆಗಾಗಿ ಕನ್ನಡಿಗರನ್ನು ಜಾಗೃತಗೊಳಿಸಿ ಕನ್ನಡ ನಾಡು, ನುಡಿ, ನೆಲ, ಜಲ, ಗಡಿ, ಸಂಸ್ಕøತಿ-ಪರಂಪರೆಗಳನ್ನು ಉಳಿಸಿ, ಬೆಳೆಸುವಲ್ಲಿ, ಅಖಂಡ ಕರ್ನಾಟಕ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ದೇಶದಲ್ಲಿಯೇ ಅಪರೂಪದ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯನ್ನು ಕಟ್ಟಲು ಶ್ರಮಿಸಿದ ಎಲ್ಲ ಮಹನೀಯರ ತ್ಯಾಗ, ಕೊಡುಗೆಗಳನ್ನು ನಾವು ಸ್ಮರಿಸಿಕೊಳ್ಳುವುದು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವುದು ಮತ್ತು ಆ ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುವುದು ಅಗತ್ಯವಿದೆ ಎಂದರು.
1980 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗದಿದ್ದರೆ ಕನ್ನಡಿಗರ ಸ್ಥಿತಿಗತಿ ಅರಿಯುವುದು ಕಷ್ಟವಾಗುತ್ತಿತ್ತು. ಇಂಥ ಸಂದರ್ಭದಲ್ಲಿ ಕನ್ನಡಿಗರಿಗೆ ಕನ್ನಡದ ದೀಕ್ಷೆ ಕೊಟ್ಟ ಕೀರ್ತಿ ಕರ್ನಾಟಕ ವಿದ್ಯಾವರ್ಧಕ ಸಂಘದ್ದು. ಕನ್ನಡಿಗರಿಗೆ ಉದ್ಯೋಗ ಸಮಸ್ಯೆ ಕಾಡುತ್ತಿದೆ. ಪ್ರಸ್ತುತ ಶಿಕ್ಷಣದಲ್ಲಿ ಇಂಗ್ಲೀಷ ಕಲಿಕೆಯ ವ್ಯಾಮೋಹ ಮಿತಿಮೀರಿದೆ, ಕನ್ನಡ ಕಲಿತರೆ ಅವಕಾಶ ಕಡಿಮೆ, ಭವಿಷ್ಯವಿಲ್ಲ ಎಂಬ ತಪ್ಪು ಧೋರಣೆಯ ಜೊತೆಗೆ ಇಂಗ್ಲೀಷ ಕಲಿಯುವ ಭರಾಟೆಯಲ್ಲಿ ನಾವೆಲ್ಲ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ವಿಮುಖರಾಗುತ್ತಿರುವುದು ವಿಷಾದನೀಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಜಾನಪದ ವಿದ್ವಾಂಸ ಡಾ. ಶ್ರೀಶೈಲ ಹುದ್ದಾರ ಅವರು ಮಾತನಾಡಿ, ಕನ್ನಡ ಭಾಷೆ ಸುಮ್ಮನೆ ಬಂದದ್ದಲ್ಲ. ಅಕ್ಷರ ಹಿಂದಿನ ಲೋಕದಲ್ಲಿ ಹುಟ್ಟಿದ್ದೆ ಜಾನಪದ. ಜಾನಪದವು ಕನ್ನಡತನ, ಕನ್ನಡ ಬದುಕು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ, ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಯವರು ಮಾತನಾಡಿ, ಕನ್ನಡ ಕಟ್ಟುವಲ್ಲಿ ನಮ್ಮ ಹಿರಿಯರು, ನಾಯಕರು ತೋರಿದ ಇಚ್ಚಾಶಕ್ತಿ, ಬದ್ಧತೆ ಅನುಕರಣೀಯ. ಅಂತ ಗುಣಗಳನ್ನು ರೂಢಿಸಿಕೊಂಡು ಕನ್ನಡ-ಕನ್ನಡತ್ವ ಕರ್ನಾಟಕವನ್ನು ಬಲಪಡಿಸುವಲ್ಲಿ, ಭದ್ರಗೊಳಿಸುವಲ್ಲಿ ಕಂಕಣಬದ್ಧರಾಗಿ ನಾವೆಲ್ಲ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ, ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ವಿಶ್ವೇಶ್ವರಿ ಬ. ಹಿರೇಮಠ ಹಾಗೂ ಸಂಘದ ಸದಸ್ಯರಾದ ಬಸವಲಿಂಗಯ್ಯ ಹಿರೇಮಠ, ಡಾ. ರಾಜಶೇಖರ ಬಶೆಟ್ಟಿ, ಎಂ.ಬಿ. ಹೆಗ್ಗೇರಿ, ವಿ.ಎಸ್.ಪತ್ರಿಮಠ ಎಸ್.ಎಂ. ರಾಚಯ್ಯನವರ, ಪ್ರಭು ಹಂಚಿನಾಳ, ಲಾರೆನ್ಸ್ ಝಳಕಿ, ಮತ್ತಿತರರು ಉಪಸ್ಥಿತರಿದ್ದರು.
ಕೊವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು.