
ಧಾರವಾಡ,ಏ29: ಬಸವಣ್ಣ ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳನ್ನು ಈ ನೆಲದಲ್ಲಿ ಮೊಳಕೆಯೊಡೆಯುವಂತೆ ಮಾಡಿದ ಪ್ರಪಂಚದ ಮೊದಲ ವ್ಯಕ್ತಿ ಎಂದು ಕ.ವಿ.ವ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಹಾಮಾನವತಾವಾದಿ, ಬಸವೇಶ್ವರರ 889 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿ, ಬಸವಣ್ಣನವರು ಏೀಸುಕ್ರಿಸ್ತನಂತೆ ದಯಾಗುಣವುಳ್ಳವರು, ಬುದ್ಧನಂತೆ ಮಹಾಮಾನವತಾವಾದಿ ಗುಣಗಳನ್ನು ಹೊಂದಿದವರಾಗಿದ್ದರು. ಕಾಯಕ ನಿಷ್ಠೆ ಮನುಷ್ಯ ಧರ್ಮದ ಬುನಾದಿಯಾಗಬೇಕೆಂದು ಪ್ರತಿಪಾದಿಸಿ ಅದರಂತೆ ಬದುಕಿದ ಬಸವಣ್ಣನವರು ಸತ್ಯಶುದ್ಧ ಕಾಯಕ, ವಿನಯ ಭಾವದ ದಾಸೋಹ ಗುಣಗಳನ್ನು ಪ್ರತಿಯೊಬ್ಬರಲ್ಲಿ ಬೆಳೆಸಿಕೊಳ್ಳುವಂತೆ ಮಾಡಿದ ಮಹಾ ಮಾನವತಾವಾದಿ ಎಂದು ಹೇಳಿದರು.
ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಣ್ಣನವರು ಆ ಕಾಲದ ಜಾತೀಯ ಸಂಕೋಲೆಯನ್ನು ತೊಡೆದು ಹಾಕಿ, ಮಾನವೀಯತೆಯನ್ನು ಎತ್ತಿಹಡಿದರು. ಜಗತ್ತಿನಲ್ಲಿ ಸಮತಾವಾದವನ್ನು ಸಾರಿದ ಬಸವಣ್ಣನವರು. ಮನುಷ್ಯರಾದ ನಾವು ಇತರರನ್ನು ಪ್ರತ್ಯೇಕ ಭಾವನೆಯಿಂದ ಕಾಣುವುದು ಸರಿಯಲ್ಲ. ನಾವು ಕೇವಲ ಬಸವಣ್ಣನವರ ವಚನಗಳನ್ನು ಕಂಠಪಾಠ ಮಾಡಿದರೆ ಸಾಲದು, ಅವರ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಅದೇ ನಿಜವಾಗಿ ನಾವು ಬಸವಣ್ಣನವರಿಗೆ ತೋರುವ ಗೌರವ ಎಂದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಮಾತನಾಡಿ, ಬಸವಣ್ಣನವರು 12 ನೇ ಶತಮಾನದಲ್ಲಿಯೇ ಇಂದಿನ ಸಂವಿಧಾನದ ಆಶಯವನ್ನು ಜಾರಿಗೆ ತರುವಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ಅವರ ತತ್ವಸಿದ್ಧಾಂತಗಳು ಇಂದು ಪ್ರಪಂಚದಾದ್ಯಂತ ಪ್ರತಿಯೊಬ್ಬರಿಂದಲೂ ಗೌರವಿಸಲ್ಪಡುತ್ತಿವೆ ಎಂದರು.
ಸಂಘದ ಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಡಾ. ಜಿನದತ್ತ ಹಡಗಲಿ, ಡಾ. ಶ್ರೀಶೈಲ ಹುದ್ದಾರ ಹಾಗೂ ಬಿ.ಎಚ್. ಹಿರೇಮಠ, ಎಸ್.ಕೆ. ಘಡೆಣ್ಣವರ, ಶ್ರೀ ವನಗುಡಿ ಮತ್ತು ಎಸ್.ಎಂ. ರಾಚಯ್ಯನವರ, ಎನ್.ಎಸ್. ಕಾಶಪ್ಪನವರ ಸೇರಿದಂತೆ ಸಂಘದ ಸಿಬ್ಬಂದಿಗಳು ಮತ್ತಿತರರು ಭಾಗವಹಿಸಿದ್ದರು.