ಕವಿಯಾದವನಿಗೆ ಪ್ರಾಸ ಕಾಡುವುದು ಸಹಜ:ಡಾ.ಟಿ.ಎಂ.ಭಾಸ್ಕರ್

ಕಲಬುರಗಿ,ಫೆ.27-ಕಾವ್ಯದ ಕೆಲವೆಡೆ ಪ್ರಾಸಗಳು ಹೊಂದಾಣಿಕೆಗೆ ಕಟ್ಟು ಬಿದ್ದು ಅರ್ಥಕ್ಕೆ ಸ್ಪಷ್ಟತೆ ಸಿಗದೇ ಕಾರ್ಯ ಸೊರಗಿದ್ದು ಕಂಡುಬರುತ್ತದೆ. ಕವಿಯಾದವನಿಗೆ ಪ್ರಾಸ ಕಾಡುವುದು ಸಹಜ ಆದರೆ ಕಾವ್ಯ ಬಿತ್ತಿಗೆ, ರಸಾನುಭವಕ್ಕೆ ಕುಂದು ಬರದಂತೆ ಎಚ್ಚರವಹಿಸುವುದು ಅಷ್ಟೇ ಮುಖ್ಯ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಮ ಭಾಸ್ಕರ್ ನುಡಿದರು.
ನಗರದ ರಂಗಾಯಣ ಸಭಾಂಗಣದಲ್ಲಿ ಬಸವ ಪ್ರಭು ಪ್ರಕಾಶನದ ವತಿಯಿಂದ ಹಮ್ಮಿಕೊಂಡ ಮಲ್ಲಮ್ಮ ಶಿವರಾಜ ಕಾಳಗಿ ವಿರಚಿತ “ಪಾತಾಳ ಗಂಗೆ” ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಲೇಖಕಿಯ ತಮ್ಮ ಪ್ರಥಮ ಕವನ ಸಂಕಲನದಲ್ಲಿ ತಡವರಿಸುತ್ತಲೇ ಗಟ್ಟಿ ಹೆಜ್ಜೆಗಳನ್ನಿಡುವ ಪ್ರಯತ್ನ ಮಾಡಿದ್ದರೆ. ಇಲ್ಲಿಯ ಕವನಗಳು ವಿಷಯ ವೈವಿಧ್ಯತೆಯಿಂದ ಕೂಡಿವೆ ಹೆಚ್ಚಿನ ಕವನಗಳು ಸಾಮಾಜಿಕ ಕಳಕಳಿ, ಪ್ರಗತಿಪರ ವಿಚಾರಧಾರೆ, ಮಾನವೀಯ ಮೌಲ್ಯಗಳಿಂದ ಕೂಡಿದ್ದು ಕಂಡುಬರುತ್ತದೆ. ತಮ್ಮ ಸುತ್ತಮುತ್ತಲು ಕಂಡು ಬರುವ ಪ್ರಸಂಗಗಳಿಗೆ ಮಿಡಿದಿದ್ದು ನಾಡು-ನುಡಿ, ದೇಶ, ಗ್ರಾಮ, ಶಾಲೆ ಸಾಮಾಜಿಕ ಸಮಸ್ಯೆ, ರಾಜಕೀಯ ಧಾರ್ಮಿಕ, ವ್ಯಕ್ತಿತ್ವ ದರ್ಶನ ಹೀಗೆ ಬಿಡಿ ಬಿಡಿ ಭಾವನೆಗಳನ್ನು ಕವಿತೆಯ ರೂಪದಲ್ಲಿ ಹಿಡಿದಿಟ್ಟಿದ್ದಾರೆ. ಯಾವ ಸಂಕೀರ್ಣತೆ ಇಲ್ಲದ ಸರಳವಾಗಿ ತಾವು ಕಂಡು ಇದನ್ನು ಹಣೆಯ ಬಲ್ಲರೆಂಬುದು ಸಂತೋಷದ ವಿಷಯ ಎಂದರು.
ಕೃತಿಯ ಕುರಿತು ಮಾತನಾಡಿದ ಡಾ.ಸುಜಾತಾ ಪಾಟೀಲ್ ಅವರು, ಮಲ್ಲಮ್ಮ ಕಾಳಗಿ ಇವರ ಕವಿ ಮನಸ್ಸು ಜಾಗೃತವಾಗಿ ಸಣ್ಣಪುಟ್ಟ ಪ್ರಸಂಗಗಳಿಗೂ ಸ್ಪಂದಿಸಿ ಕಾವ್ಯ ರಚನೆಗೈದಿದ್ದು ಮೆಚತಕ್ಕ ಸಂಗತಿಯಾಗಿದೆ. ಚೇತನ್ ಯೂಥ್ ಫೆÇೀರಂ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ದಾಂಪತ್ಯ ಬದುಕಿನೊಂದಿಗೆ ಹೆಜ್ಜೆ ಹಾಕುತ್ತ ಬಾಳ ಸಂಗಾತಿ, ಇಬ್ಬರು ಮಕ್ಕಳೊಂದಿಗೆ ಕವನಗಳ ಸವಿ ಹಂಚುತ್ತಾ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ. ಮಹಿಳೆಯಾಗಿ ಮಹಿಳಾ ನೋವು ನಲಿವುಗಳಿಗೆ ಧ್ವನಿಯಾಗಿ ಸಕಾರಾತ್ಮಕ ನೆಲೆಯಲ್ಲಿ ಕವನಗಳನ್ನು ಕಟ್ಟಿದ್ದಾರೆ. ಅಲ್ಲಲ್ಲಿ ನಿರಾಶೆಯ ಎಳೆಗಳು ಬಂದರೂ ಆಧುನಿಕತೆ ಯುಗದಲ್ಲಿ ಮಹಿಳೆಯರಿಗೆ ಏನೆಲ್ಲ ದಕ್ಕಿದೆ ಅದಕ್ಕೆ ಸಮಾಜದ ಪ್ರತಿಕ್ರಿಯೆ ಏನು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಮಹಾಗಾoವ್ ಕಳ್ಳಿ ಮಠದ ವಿರೂಪಾಕ್ಷ ದೇವರು ವಹಿಸಿದ್ದರು. ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಏ.ಕೆ ರಾಮೇಶ್ವರ ಉದ್ಘಾಟಿಸಿದರು. ರೇವಣಸಿದ್ಧಪ್ಪ ಕಾಳಗಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆ ಮೇಲೆ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಿಂಗಣ್ಣ ಗೋನಾಳ, ಲೇಖಕಿ ಮಲ್ಲಮ್ಮ ಶಿವರಾಜ ಕಾಳಗಿ, ಡಾ. ಶರಣಬಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ವಿಜಯಲಕ್ಷ್ಮಿ ಕೋಸಗಿ,ನೀಲಾಂಬಿಕಾ ಮಹಾಗಾಂವ್ಕರ್ ,ಬಿ.ಎಚ್. ನೀರಗುಡಿ, ಶರಣಗೌಡ ಪಾಟೀಲ ಪಾಳ, ಶಿವಕುಮಾರ ತಡಕಲ್, ಶರಣಬಸಪ್ಪ ವೀರಶೆಟ್ಟಿ, ಜೈಪ್ರಕಾಶ ಓಕಳಿ, ಶ್ರೀಕಾಂತ ಪಾಟೀಲ, ಬಸವರಾಜ ಶಿರಡಿ, ಅಣ್ಣಪ್ಪ ಭದ್ರಶೆಟ್ಟಿ, ಶೈಲಜಾ ಮಠಪತಿ, ಸುರೇಖಾ ಮಠ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು . ಶಿಕ್ಷಕ ಅಂಬರಾಯ ಮಡ್ಡೆ ಕಾರ್ಯಕ್ರಮ ನಿರೂಪಿಸಿದರೆ ಡಾ. ಶರಣಬಸಪ್ಪ ವಡ್ಡನಕೇರಿಯವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳ ನಾಡಿದರು. ಶಿವರಾಜ್ ಕಾಳಗಿ ಉಪಸ್ಥಿತರಿದ್ದರು.