ಕವಿಗಳ ಸಾಹಿತ್ಯದ ಸೃಜನಶೀಲತೆ ಸ್ಮರಣೀಯ                 

ಸೊರಬ. ನ.24: ಕನ್ನಡ ಕವಿಗಳ ಸಾಹಿತ್ಯದ ಸೃಜನಶೀಲತೆ ಹಾಗೂ ಅವರ ಕ್ರಿಯಾತ್ಮಕತೆ ಸಾಹಿತ್ಯ ಚಟುವಟಿಕೆಯಲ್ಲಿ ಶ್ಲಾಘನೀಯವಾದದ್ದು ಎಂದು ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ದಂತ ವೈದ್ಯ ಡಾ. ಜ್ಞಾನೇಶ್ ಹೇಳಿದರು.ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆ ವತಿಯಿಂದ ಡಾ.ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ರಾಜ್ಯಮಟ್ಟದ ೬೭ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪುನೀತ್ ರಾಜಕುಮಾರ್ ರವರ ಪುಣ್ಯ ಸ್ಮರಣೆಯನ್ನು ರಕ್ತದಾನ ಶಿಬಿರ ನಡೆಸುವ ಮೂಲಕ ಆಚರಿಸುತ್ತಿರುವುದು  ಸಂತಸದ ವಿಷಯವಾಗಿದೆ. ಕಲೆಯ ದೃಷ್ಟಿಯಿಂದ ಹಾಗೂ ಸೇವಾ ಮನೋಭಾವನೆ ದೃಷ್ಟಿಯಿಂದ ಎಲ್ಲರ ಮನವನ್ನು ಗೆದ್ದಿರುವ ಅಪ್ಪು ರವರ ಸೇವಾ ಕಾರ್ಯಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದ ಅವರು ಕನ್ನಡಕ್ಕೆ ತನ್ನದೇ ಆದ ಆಳವಾದ ಸಾಹಿತ್ಯದ ಸಂಪತ್ತಿನ ಮೂಲವನ್ನು ಹೊಂದಿದೆ. ಆದಿ ಕವಿ ಪಂಪನಿಂದ ಆಧುನಿಕ ಯುಗದ ಸಾಹಿತಿಗಳವರೆಗೂ ಸಾಹಿತ್ಯದ ಸೊಬಗು ಹರಡಿರುವುದು ಕವಿಗಳ ಸೃಜನಶೀಲತೆಯ ಹಾಗೂ ಅವರ ಕ್ರಿಯಾತ್ಮಕತೆಯನ್ನು ತೋರಿಸುತ್ತದೆ ಎಂದರು. ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ ಕರ್ನಾಟಕ ರಾಜ್ಯ ವನ್ನ ಏಕೀಕರಣಗೊಳಿಸುವಲ್ಲಿ  ಸಾಹಿತಿಗಳ ಕನ್ನಡಪರ ಚಳುವಳಿಗಳು ಪ್ರಮುಖವಾಗಿದ್ದವು. ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರಕುವಂತಾಗಬೇಕು. ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಬಿಟ್ಟು ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ  ಸರ್ಕಾರಗಳು ಗಮನಹರಿಸಬೇಕು ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಡಾ. ಮಹಾಂತ ಸ್ವಾಮೀಜಿ ಮಾತನಾಡಿ ಪುನೀತ್ ರಾಜಕುಮಾರ್ ಅವರು ವಿಶಾಲವಾದ ಸಹೃದಯತೆಯ ಸೇವಾ ಭಾವನೆಯನ್ನು ಬೆಳೆಸಿಕೊಂಡು ಆದರ್ಶ ವ್ಯಕ್ತಿತ್ವವನ್ನು ಮೆರೆದವರು. ಅರ್ಥಪೂರ್ಣವಾದ ಬದುಕನ್ನು ಆದರ್ಶವಾದ ವ್ಯಕ್ತಿತ್ವ. ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ  ಮಾದರಿಯಾದ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದರು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರವೀಣ ಹಿರೇ ಇಡಗೋಡು ವಹಿಸಿದ್ದರು. ಶಿವಾಚಾರ್ಯ ಸ್ವಾಮೀಜಿ.ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿಜಯಕುಮಾರ್, ರಾಜ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಉ ಪ್ಪಳ್ಳಿ,ರಾಜಪ್ಪ ಮಾಸ್ತರ್, ಡಾ. ಎಂ ಕೆ ಭಟ್, ಡಾ. ಸೈಯದ್, ಡಾ. ನಾಗರಾಜ್, ನಾಗರಾಜ್ ಜೈನ್, ರವಿ ಕೃಷ್ಣ, ಕೇಶವಮೂರ್ತಿ, ಚಂದ್ರಪ್ಪ ಆರ್ ಬಿ, ದೇವರಾಜ್, ಗುರು, ರಾಘವೇಂದ್ರ ಸೇರಿದಂತೆ ಮೊದಲಾದವರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.