“ಕವಿಗಳ ಕಣ್ಣಲ್ಲಿ ಪುನೀತ್ ರಾಜಕುಮಾರ್” ಕವಿಗೋಷ್ಠಿ

ಕಲಬುರಗಿ,ಸೆ.18-ವಿಶ್ವೇಶ್ವರಯ್ಯ ಪ್ರತಿಷ್ಠಾನವು ತನ್ನ 30ನೇ ವಾರ್ಷಿಕೋತ್ಸವದ ಅಂಗವಾಗಿ ” ಕವಿಗಳ ಕಣ್ಣಲ್ಲಿ ಪುನೀತ್ ರಾಜಕುಮಾರ್” ಅಖಿಲ ಕರ್ನಾಟಕ 10ನೇ ಕವಿ ಸಮ್ಮೇಳನವನ್ನು ಅಕ್ಟೋಬರ್ 8 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಲ್ಯಾಣ ಕರ್ನಾಟಕದ ಹಿರಿಯ ಕವಿ ಸಿದ್ಧರಾಮ ಹೊನ್ಕಲ್ ಅವರನ್ನು ಆಯ್ಕೆ ಮಾಡಿದ್ದು, ಅವರ ಅಧ್ಯಕ್ಷತೆಯಲ್ಲಿ ವಿಶೇಷ ಕವಿಗೋಷ್ಠಿ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ಕಾವ್ಯ ಪರಂಪರೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದೆ.
ಸಿದ್ಧರಾಮ ಹೊನ್ಕಲ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಶಾಸ್ತ್ರ ಭೋದಕರಾಗಿ ಸೇವೆ ಸಲ್ಲಿಸಿದ್ದಾರೆ. ವೈವಿದ್ಯಮಯ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ಕವನ, ಹನಿಗವನ, ಗಜಲ್, ಹೈಕುಗಳು ಮತ್ತು ಶಾಯರಿಗಳು ಸೇರಿವೆ. 4 ಕಥಾಸಂಕಲನ, 5 ಲಲಿತ ಪ್ರಬಂಧ, 6 ಪ್ರವಾಸ ಕಥನಗಳು ಮತ್ತು 18ಕ್ಕೂ ಹೆಚ್ಚು ಗ್ರಂಥಗಳನ್ನು ಸಂಪಾದಿಸಿದ್ದಾರೆ. ತಮ್ಮ ಸಾಹಿತ್ಯ ಕೃತಿಗಳಿಗೆ ಕಲಬುರ್ಗಿ ವಿವಿಯಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಂಘ-ಸಂಸ್ಥೆಗಳಿಂದ ಅತ್ತಿಮಬ್ಬೆ ಪ್ರಶಸ್ತಿ ಮತ್ತು ಶ್ರೀವಿಜಯ ಪ್ರಶಸ್ತಿಗಳ ಜೊತೆ ಹತ್ತಾರು ಪ್ರಶಸ್ತಿ ಲಭಿಸಿದೆ. ಇವರ ಅನೇಕ ಲೇಖನಗಳು ಪಠ್ಯವಾಗಿರುವುದು ವಿಶೇಷ. ಇವರ ಒಟ್ಟಾರೆ ಸಾಹಿತ್ಯದ ಮೇಲೆ ಇಬ್ಬರು ವಿದ್ಯಾರ್ಥಿಗಳು ಎಂ.ಫೀಲ್ ಪದವಿಗಳನ್ನು ಪಡೆದಿದ್ದಾರೆ. ಯಾದಗಿರಿ ಜಿಲ್ಲೆಯ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ವಿಶೇಷ.
ಅಕ್ಟೋಬರ್ 8 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಯಲ್ಲಿ, ನಾಡಿನ ವಿವಿಧ ಕಲಾವಿದರಿಂದ ಚಿತ್ರಕಲೆ, ವ್ಯಂಗ್ಯ ಚಿತ್ರ ಹಾಗೂ ಪುಸ್ತಕ, ಛಾಯಾಚಿತ್ರ ಪ್ರದರ್ಶನದ ಜೊತೆಗೆ, 65ನೇ ಸಾಂಸ್ಕøತಿಕ ಪ್ರತಿಭೋತ್ಸವದ ಅಂಗವಾಗಿ, ನಾಡಿನ ಅನೇಕ ಕಲಾವಿದರಿಂದ ಸಾಂಸ್ಕøತಿಕ ಪ್ರದರ್ಶನ ಜರುಗುತ್ತಿವೆ. ಮದ್ಯಾಹ್ನ 2 ರಿಂದ 5 ಗಂಟೆಯವರೆಗೆ ಪುನೀತ್ ರಾಜಕುಮಾರ್ ಹೆಸರಿನ ಕವಿಗೋಷ್ಠಿಯು ಜರುಗಲಿದೆ. ಕವಿಗಳಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದಲ್ಲದೆ, ಕವಿಗಳ ಕಣ್ಣಲ್ಲಿ ಪುನೀತ್ ರಾಜಕುಮಾರ್ ಕವಿಗೋಷ್ಠಿ ಹಾಗೂ ಕವನ ರಚನಾ ಸ್ಪರ್ಧೆ ನಡೆಯಲಿದೆ. ಆಯ್ಕೆಯಾದ ಬೇರೆ ಬೇರೆ ಜಿಲ್ಲೆಯ ಕವಿಗಳು ಕವನ ವಾಚಿಸಲಿದ್ದಾರೆ. ಭಾಗವಹಿಸಲು ಸಾಧ್ಯವಾಗದವರು, ಪುನೀತ್ ರಾಜಕುಮಾರ್ ಕುರಿತು 2 ಕವನ ಕಳುಹಿಸಿದರೆ, ಪ್ರಕಟವಾಗಲಿರುವ ಕವನ ಸಂಕಲನದಲ್ಲಿ ಸೇರಿಸಲಾಗುತ್ತದೆ.
ಸಂಜೆ ವಿಚಾರ ಸಂಕಿರಣ ಹಾಗೂ ವಿಶೇಷ ಸಾಧಕರಿಗೆ ಪ್ರತಿಷ್ಠಾನದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಹಾಗೂ ಸಮಾರಂಭದಲ್ಲಿ ಗೌರವ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ ಉಪಸ್ಥಿತರಿರುತ್ತಾರೆಂದು ಪ್ರತಿಷ್ಠಾನದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.