ಕವಾಡಿಗರ ಹಟ್ಟಿಯಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗಾಗಿ ಜಾಥಾ ಹಾಗೂ ಪಂಜಿನ ಮೆರವಣಿಗೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ ಆ. ೨೮;ಚಿತ್ರದುರ್ಗ ನಗರಸಭೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಇಲ್ಲಿನ ಕವಾಡಿಗರ ಹಟ್ಟಿಯಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಶನಿವಾರದಂದು ಜಾಗೃತಿ ಜಾಥಾ ಹಾಗೂ ಪಂಜಿನ ಮೆರವಣಿಗೆ ಆಯೋಜಿಸಲಾಯಿತು.ಕಲುಷಿತ ನೀರು ಸೇವನೆ ಹಾಗೂ ಅನೈರ್ಮಲ್ಯದಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಗಟ್ಟಲು, ಸಾರ್ವಜನಿಕರಲ್ಲಿ ನೀರು ಹಾಗೂ ಸ್ವಚ್ಛ ಪರಿಸರ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮತ್ತು ನಗರಸಭೆ ಮುಂದಾಗಿದೆ.  ಸಾರ್ವಜನಿಕರು ಕಾಯಿಸಿ, ಆರಿಸಿದ ನೀರು ಕುಡಿಯುವುದು ಹಾಗೂ ಶೌಚಾಲಯ ಬಳಸುವುದು ಹಾಗೂ ಮಲವಿಸರ್ಜನೆ ಬಳಿಕ ಕೈಗಳ್ಳನ್ನು ಸಾಬೂನಿನಿಂದ ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು, ಚರಂಡಿಗೆ ಪ್ಲಾಸ್ಟಿಕ್ ಸೇರಿದಂತೆ ಹಲವು ತ್ಯಾಜ್ಯವನ್ನು ಎಸೆಯಬಾರದು, ಚರಂಡಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಹೀಗೆ ಹಲವು ಬಗೆಯ ಆರೋಗ್ಯ ಶಿಕ್ಷಣ ನೀಡುವುದು ಇಲಾಖೆಯ ಉದ್ದೇಶವಾಗಿದ್ದು, ಸಾರ್ವಜನಿಕರ ಗಮನ ಸೆಳೆದು, ಅವರಲ್ಲಿ ಅರಿವು ಮೂಡಿಸುವ ಸಲುವಾಗಿ ಕವಾಡಿಗರ ಹಟ್ಟಿಯ ವಿವಿಧ ಬಡಾವಣೆಗಳಲ್ಲಿ ಜಾಥಾ ಹಾಗೂ ಪಂಜಿನ ಮೆರವಣಿಗೆ ಏರ್ಪಡಿಸಲಾಯಿತು. ಭದ್ರಾ ಮೇಲ್ದಂಡೆ ಯೋಜನೆ ಭೂಸ್ವಾಧೀನಾಧಿಕಾರಿ ವಿವೇಕಾನಂದ, ನಗರಸಭೆ ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಕ ಮಂಜುನಾಥ್ ಸೇರಿದಂತೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ನಗರಸಭೆಯ ವಿವಿಧ ಅಧಿಕಾರಿ, ಸಿಬ್ಬಂದಿಗಳು ಜಾಥಾ ಮತ್ತು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.